

ಮೈಸೂರು: ಮೈಸೂರಿನ ಭಾಭಾ ಅಣುಸಂಶೋಧನಾ ಸಂಸ್ಥೆಯ ವಿಜ್ಞಾನಿ ಕಳೆದ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು, ಆತಂಕ ಮೂಡಿಸಿದೆ. ಸಂಸ್ಥೆಯ ರೇರ್ ಮೆಟಿರಿಯಲ್ಸ್ ಪ್ರಾಜೆಕ್ಟ್ನಲ್ಲಿ ಅಸಿಸ್ಟೆಂಟ್ ಸೈಂಟಿಫಿಕ್ ಆಫೀಸರ್ ಆಗಿರುವ 24 ವರ್ಷ ವಯಸ್ಸಿನ ಗುಲ್ಲ ಅಭಿಷೇಕ್ ರೆಡ್ಡಿ ಮೈಸೂರಿನ ಎಲವಾಲದ ಕಾವೇರಿ ಬಡಾವಣೆಯಲ್ಲಿ ನೆಲೆಸಿದ್ದರು.
ಆಂಧ್ರಪ್ರದೇಶದ ಚಿತ್ತೂರು ಮೂಲದವರಾದ ಇವರು ಒಂದು ವರ್ಷದ ಹಿಂದಷ್ಟೇ ಭಾಭಾ ಅಟಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಉದ್ಯೋಗಕ್ಕೆ ಸೇರಿದ್ದರು. ಇವರ ಪಾಲಕರು ಕಳೆದ ತಿಂಗಳಲ್ಲಿ ನಿಧನರಾದ್ದರಿಂದ, ಇವರು ಖಿನ್ನತೆಯಿಂದ ಬಳಲುತ್ತಿದ್ದು, ಯಾರಿಗೂ ಹೇಳದೆ ಎಲ್ಲಿಗಾದರೂ ಹೋಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನೆರೆಮನೆಯವರು ಇವರು ಅ. 6ರ ಮಧ್ಯಾಹ್ನ ದ್ವಿಚಕ್ರ ವಾಹನದಲ್ಲಿ ತೆರಳಿದ್ದನ್ನು ನೋಡಿದ್ದೇ ಕೊನೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.