

ನಾಗಮಂಗಲ: ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ 2020ರ ‘ವಿಜ್ಞಾತಂ’ ಪ್ರಶಸ್ತಿ ಪ್ರದಾನ ಹಾಗೂ ಶ್ರೀ ಮಠದ ಪೀಠಾಧ್ಯಕ್ಷ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ 7ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಸಾವಿರಾರು ಭಕ್ತರು, ವಿಜ್ಞಾನ ಆಸಕ್ತಿಯುಳ್ಳ ಶಿಕ್ಷಕರು ಹಾಗೂ ವಿಜ್ಞಾನ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಮಠದ ಪರವಾಗಿ ಶ್ರೀಗಳು ಅಂತಾರಾಷ್ಟ್ರೀಯ ಖ್ಯಾತಿಯ ವಿಜ್ಞಾನಿ ಡಾ.ವಾಸುದೇವ್ ಕಲ್ಕುಂಟೆ ಆತ್ರೆ ಅವರಿಗೆ 2020ರ ‘ವಿಜ್ಞಾತಂ’ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿ 3 ಲಕ್ಷ ರೂ. ನಗದು, ಪದಕ, ಜ್ಞಾನ ಸರಸ್ವತಿಯ ಮೂರ್ತಿ ನೀಡಿ, ಮೈಸೂರು ಪೇಟ ತೊಡಿಸಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿದ ವಿಜ್ಞಾನಿ ಡಾ. ವಾಸುದೇವ್ ಕಲ್ಕುಂಟೆ ಆತ್ರೆ ಮಾತನಾಡಿ, ದೇಶವನ್ನು ಕಟ್ಟಲು ವಿಜ್ಞಾನ ಅವಶ್ಯಕ. ಆದರೆ ಮನಸ್ಸುಗಳನ್ನು ಕಟ್ಟಲು ಅಧ್ಯಾತ್ಮ ಅತಿಮುಖ್ಯ. ಅದಕ್ಕಾಗಿ ಜನಸಾಮಾನ್ಯರನ್ನು ಜ್ಞಾನ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಧರ್ಮಗುರುಗಳ ಪಾತ್ರ ಅವಶ್ಯಕವಾಗಿದೆ. ಗ್ರಾಮೀಣ ಪ್ರದೇಶದಂತ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ಇಂತಹ ದೊಡ್ಡ ಮೇಳ ಆಯೋಜಿಸಿರುವುದು ಶ್ಲಾಘನೀಯ ಎಂದರು.
ಅದ್ದೂರಿ ಪಟ್ಟಾಭಿಷೇಕ ಮಹೋತ್ಸವ: ನಂತರ ಶ್ರೀಗಳ 7ನೇ ವರ್ಷದ ಪಟ್ಟಾಭಿಷೇಕ ಮಹೋತ್ಸವ ವೈಭವಯುತವಾಗಿ ನಡೆಯಿತು. ಶ್ರೀಗಳನ್ನು ಪೀಠದಲ್ಲಿ ಕೂರಿಸಿ, ಚಿನ್ನದ ಕಂಠಿಹಾರ ಮತ್ತು ಮುತ್ತು ರತ್ನಗಳನ್ನು ತೊಡಿಸಿ, ಚಿನ್ನದ ಕಿರೀಟ ಧಾರಣೆ ಮಾಡಿ ರೇಷ್ಮೆ ಹೊದಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಪಟ್ಟಾಭಿಷೇಕ ಮಾಡಲಾಯಿತು. ಸಾಧು-ಸಂತರು ಹಾಗೂ ಗಣ್ಯರು ದೀಪ ಬೆಳಗುವ ಮೂಲಕ ಗುರುಗಳಿಗೆ ನಮನ ಸಲ್ಲಿಸಿದರು. ಮೈಸೂರಿನ ರಾಮಕೃಷ್ಣ ಆಶ್ರಮದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಶೇಖರನಾಥ ಸ್ವಾಮೀಜಿ, ಕರ್ನಾಟಕ ಸವೋದಯ ಕೃಷಿಕ್ ಫೌಂಡೇಷನ್ ಅಧ್ಯಕ್ಷ ಡಾ.ವೈ.ಕೆ.ಪುಟ್ಟಸೋಮೇಗೌಡ, ಶಾಸಕ ಸುರೇಶ್ಗೌಡ, ವಿಧಾನಪರಿಷತ್ ಸದಸ್ಯ ಎನ್. ಅಪ್ಪಾಜಿಗೌಡ, ಕುಲಪತಿ ಡಾ. ಎಸ್. ಚಂದ್ರಶೇಖರಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.