

ಬೆಂಗಳೂರು: ನೋವಿಲ್ಲದ ಸಮಯಕ್ಕಾಗಿ ಕಾಯುತ್ತಾ ಕುಳಿತರೆ ಬದುಕಿನ ಅಮೂಲ್ಯ ಸಮಯ ಮುಗಿದು ಹೋಗುತ್ತದೆ ಎಂದು ವಿಜ್ಞಾನಿ ಹಾಗೂ ಲೇಖಕಿ ನೇಮಿಚಂದ್ರ ಅಭಿಪ್ರಾಯಿಸಿದ್ದಾರೆ. ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘವು ಆನಂದರಾವ್ ವೃತ್ತದ ಬಳಿ ಇರುವ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ದೀಪಾ ಅಜಯ್ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ‘ಬದುಕು ಹೋರಾಟವಾದಾಗ ಹೋರಾಡಿ ಬದುಕಿದ ತಾಯಂದಿರು’ ಕುರಿತು ಅವರು ಉಪನ್ಯಾಸ ನೀಡಿದರು.
ಜೀವನದಲ್ಲಿ ಉನ್ನತ ಸಾಧನೆ ಮಾಡುವವರಿಗೆಲ್ಲರಿಗೂ ಪರಿಸ್ಥಿತಿ ಪೂರಕವಾಗಿರುವುದಿಲ್ಲ. ಹಾಗಂತ ನೋವಿಲ್ಲದ ಕ್ಷಣಕ್ಕಾಗಿ ಕಾಯುತ್ತಾ ಕುಳಿತರೆ ಸಮಯ ಕೈಮೀರಿ ಹೋಗುತ್ತದೆ. ಆದ್ದರಿಂದ ಯಾವುದೇ ಪರಿಸ್ಥಿತಿಯಲ್ಲೂ ಸಾಧನೆಯ ಪ್ರಯತ್ನ ಕೈಬಿಡಬಾರದು. ನೋವಿನೊಡನೆ ಬದುಕಿ ಸಾಧನೆ ಮಾಡಿದ ದೀಪಾ ಮಲ್ಲಿಕ್, ಹರಪ್ರೀತ್ ಅಹ್ಲುವಾಲಿಯಾರಂತಹವರ ಸಾಧನೆ ಎಲ್ಲರಿಗೂ ಮಾದರಿ. ಈ ಹಿನ್ನೆಲೆಯಲ್ಲಿ ದೀಪಾ ಅಜಯ್‌ರವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಉದ್ಯೋಗ ಮಾಡುತ್ತ, ಇಬ್ಬರು ವಿಶೇಷ ಚೇತನ ಮಕ್ಕಳನ್ನು ಸಾಕುತ್ತಾ, ಸಂಸಾರ ನಡೆಸುವುದರ ಜೊತೆಗೆ ಪವರ್ ಲಿಫ್ಟಿಂಗ್‌ನಲ್ಲಿ ವಿಶೇಷ ಆಸಕ್ತಿ ಬೆಳೆಸಿಕೊಂಡು, ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಪಡೆದು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದಿರುವದು ಅಸಾಮಾನ್ಯ ಸಂಗತಿ ಎಂದು ನೇಮಿಚಂದ್ರ ಪ್ರಶಂಸಿದರು.
ಕಾರ್ಯಕ್ರಮದಲ್ಲಿ ಮನೋವೈದ್ಯೆ ಹಾಗೂ ಕಲಾವಿದೆ ಡಾ.ಕೆ.ಎಸ್.ಪವಿತ್ರ ಅವರು ವಿಶೇಷ ನೃತ್ಯ ಪ್ರದರ್ಶನ ನೀಡಿದರು. ಹಿರಿಯ ಪತ್ರಕರ್ತ ನಾಗೇಶ ಹೆಗಡೆ, ಲೆಕ್ಕಾಧಿಕಾರಿ ಭಾಗ್ಯ, ಬಸವಂತಿ ಕೋಟೂರ, ಸಂಘದ ಸದಸ್ಯರಾದ ಉಲಿಗೇ ಸ್ವಾಮಿ, ಗೋಪಾಲ, ನಿತ್ಯಾನಂದಪ್ಪ, ರಾಘವೇಂದ್ರ ರಾವ್, ಶ್ರೀದೇವಿ ಸಾಲಿಮಠ, ಬಸವರಾಜ ಹಂದ್ರಾಳ ಮುಂತಾದವರು ಉಪಸ್ಥಿತರಿದ್ದರು.