

ಹಾನಗಲ್ಲ: ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಹಾಗೂ ನಿರ್ವಹಣೆಯಲ್ಲಿ ರೈತರು ವೈಜ್ಞಾನಿಕ ವಿಧಾನಗಳನ್ನು ಅನುಸರಿಸಬೇಕು ಎಂದು ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಎಂ.ಎಚ್. ಸಂತೋಷ ಹೇಳಿದರು.
ತಾಲೂಕಿನ ಕಿರವಾಡಿ ಗ್ರಾಮದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ, ತೋಟಗಾರಿಕೆ ಇಲಾಖೆ, ಸ್ಕೋಡ್ವೆಸ್ ಸಂಸ್ಥೆ ಶಿರಸಿ, ಕಿರವಾಡಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ತೋಟಗಾರಿಕೆ ಬೆಳೆಗಳ ಸಂರಕ್ಷಣೆ ಮತ್ತು ನಿರ್ವಹಣೆಯಲ್ಲಿ ವೈಜ್ಞಾನಿಕ ವಿಧಾನಗಳ ಪ್ರಾಮುಖ್ಯತೆ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಅಡಕೆ, ತೆಂಗು, ಶುಂಠಿ ಬೆಳೆಗಳಿಗೆ ತಂತ್ರಜ್ಞಾನ ಆಧಾರಿತ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ನೀರು, ಗೊಬ್ಬರ ನೀಡುವುದು, ನೀರು ನಿಲ್ಲದಂತೆ ಕೈಗೊಳ್ಳಬಹುದಾದ ಕ್ರಮಗಳು, ರೋಗಗಳ ಹತೋಟಿ ಕ್ರಮಗಳು, ಬೆಳೆಗಳ ಸಮಗ್ರ ನಿರ್ವಹಣೆ ಕುರಿತು ತರಬೇತಿ ಹಾಗೂ ಮಾಹಿತಿಗಳನ್ನು ರೈತರು ಪಡೆದರೆ ಸಮಸ್ಯೆಗಳಿಂದ ಮುಕ್ತರಾಗಿ, ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು.
ಸ್ಕೋಡ್ವೇಸ್ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ನೀಲಕಂಠ ಶೇಷಗಿರಿ ಮಾತನಾಡಿ, ರೈತ ಉತ್ಪಾದಕ ಕಂಪನಿಗಳ ಶೇರುದಾರರು ತಮ್ಮ ತೋಟಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು. ವೈಜ್ಞಾನಿಕವಾಗಿ ಸಿದ್ಧಪಡಿಸಲಾದ ಯಂತ್ರೋಪಕರಣ ಬಳಸುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಉಪಯೋಗ ಪಡೆಯಬಹುದಾಗಿದೆ. ಮಾರುಕಟ್ಟೆ ಅಭ್ಯಸಿಸುವ ಮೂಲಕ ರೈತರು ಕಾಲಕಾಲಕ್ಕೆ ನೂತನ ಪದ್ಧತಿ ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದರು.
ರೈತ ಉತ್ಪಾದಕ ಕಂಪನಿ ಜಿಲ್ಲಾ ಸಂಯೋಜಕ ಜಗದೀಶ ಮಡಿವಾಳರ, ಹಿರಿಯ ತೋಟಗಾರಿಕೆ ನಿರ್ದೇಶಕ ಮಂಜುನಾಥ ಬಣಕಾರ ಮಾತನಾಡಿ, ಹಾನಗಲ್ಲ ತಾಲೂಕು ಮಾವು, ಅಡಕೆ, ಬಾಳೆ, ಸಪೋಟ, ಪೇರು ಸೇರಿದಂತೆ ತೋಟಗಾರಿಕೆಗೆ ಅನುಕೂಲಕರವಾದ ಹವಾಮಾನ ಹಾಗೂ ಮಣ್ಣಿನ ಫಲವತ್ತತೆ ಹೊಂದಿದೆ. ಈಗಾಗಲೇ ತಾಲೂಕಿನ ಬಹಳಷ್ಟು ಪ್ರದೇಶ ಅಡಕೆ ತೋಟ ಆವರಿಸಿದೆ. ಇದರ ಮಧ್ಯಂತರ ಬೆಳೆಗಳನ್ನಾಗಿ ಶುಂಠಿ, ಅರಿಷಿಣ, ಪೇರು ಮತ್ತಿತರ ಬೆಳೆಗಳತ್ತ ರೈತರು ಆಸಕ್ತಿ ತೋರಬೇಕಾಗಿದೆ ಎಂದು ಸಲಹೆ ನೀಡಿದರು.
ಕಿರವಾಡಿ ತೋಟಗಾರಿಕೆ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಶಿವಲಿಂಗಪ್ಪ ತಲ್ಲೂರ, ಸಹಾಯಕ ತೋಟಗಾರಿಕೆ ಅಧಿಕಾರಿ ಸರಸ್ವತಿ ಕಬ್ಬೂರ, ಗ್ರಾಪಂ ಅಧ್ಯಕ್ಷ ಪರಮೇಶ್ವರಪ್ಪ ಶ್ಯಾಡಗುಪ್ಪಿ, ಪ್ರಗತಿಪರ ರೈತರಾದ ಶಾಂತನಗೌಡ ಪಾಟೀಲ, ಬಸವಲಿಂಗಪ್ಪಗೌಡ ಪಾಟೀಲ, ಧರ್ಮಪ್ಪ ಕಲ್ಲೇರ, ಜಿ. ಫಾಮ್ರ್ ಸರ್ವಿಸಿಸ್ ಸಂಯೋಜಕ ಪ್ರಮೋದ ಸನದಿ, ಗಣೇಶ ಹಳ್ಳೂರ ಇತರರು ಇದ್ದರು.