ಪ್ರತಿಯೊಬ್ಬರಲ್ಲಿ ವೈಜ್ಞಾನಿಕ ಚಿಂತನೆ ಅಗತ್ಯ: ಎಸಿ ಡಾ.ನಾಗರಾಜ್

Science Prog.
Published on

ಚಿಕ್ಕಮಗಳೂರು: ಸಮಾಜದಲ್ಲಿ ಪ್ರತಿಯೊಬ್ಬರೂ ವೈಜ್ಞಾನಿಕವಾಗಿ ಆಲೋಚನೆ ಮಾಡುವ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡುವುದು ವಿಜ್ಞಾನ ಪರಿಷತ್ತಿನ ಮೂಲ ಉದ್ದೇಶ ಎಂದು ಉಪ ವಿಭಾಗಾಧಿಕಾರಿ ಡಾ.ನಾಗರಾಜ್ ಹೇಳಿದರು. ಜಿಲ್ಲಾ ವಿಜ್ಞಾನ ಕೇಂದ್ರ, ರಾಜ್ಯ ವಿಜ್ಞಾನ ಪರಿಷತ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ನಗರದ ಜೂನಿಯರ್ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಪ್ರಥಮ ನೋಬೆಲ್ ಪ್ರಶಸ್ತಿ:

ಭಾರತೀಯರು ಅನೇಕ ಕ್ಷೇತ್ರದಲ್ಲಿ ಬಹಳಷ್ಟು ಸಾಧನೆ ಮಾಡಿದ್ದು ಆ ಸಾಲಿನಲ್ಲಿ ಸರ್ ಸಿ.ವಿ.ರಾಮನ್ ಅವರು 19ನೇ ಶತಮಾನದಲ್ಲಿ ಬೆಳಕಿನ ಪ್ರತಿಫಲನ ವಿಷಯದ ಕುರಿತು ರಾಮನ್ ಎಫೆಕ್ಟ್ ಎಂಬ ಸಂಶೋಧನೆಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ಬಾರಿಗೆ ಭಾರತೀಯನಿಗೆ ನೋಬೆಲ್ ಪ್ರಶಸ್ತಿ ದೊರಕಿದೆ. ನಮ್ಮ ದೇಶದಲ್ಲಿ ಸಂಶೋಧಕ ಮತ್ತು ಸಾಧಕರಿದ್ದಾರೆ. ಆದರೆ ಪಾಶ್ಚಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತೀಯರಲ್ಲಿ ವೈಜ್ಞಾನಿಕ ಪ್ರಜ್ಞೆ ಕಡಿಮೆಯಿದ್ದು ಇದಕ್ಕೆ ಕಾರಣ ಅವರಲ್ಲಿರುವ ಮೌಢ್ಯ ಎಂದರು. ಆ ಮೌಢ್ಯವನ್ನು ಹೋಗಲಾಡಿಸಲು ಪ್ರತಿಯೊಬ್ಬರಲ್ಲಿ ಆಲೋಚನಾ ಕ್ರಮಗಳು ಬರಬೇಕು ಎಂದು ತಿಳಿಸಿದರು.

ಮಕ್ಕಳಿಗಾಗಿಯೇ ಕಾರ್ಯಕ್ರಮ:

ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್ತಿನ ಸದಸ್ಯ ಎ.ಎನ್.ಮಹೇಶ್ ಮಾತನಾಡಿ ವಿಜ್ಞಾನ, ಮೂಲ ವಿಜ್ಞಾನ, ವೈಜ್ಞಾನಿಕ ಚಿಂತನೆ ಏನೆಂಬುದನ್ನು ಅರಿಯಲು ನಿಮ್ಮ ಆಲೋಚನಾ ಲಹರಿಯನ್ನು ಒರೆಗಲ್ಲಿಗೆ ಹಚ್ಚುವಂಥ ಕೆಲಸ ವಿಜ್ಞಾನ ಕೇಂದ್ರದಿಂದ ಮಾಡಲಾಗುತ್ತಿದೆ. ಮಕ್ಕಳಲ್ಲಿ ಚಿಂತನೆ ಹಾಗೂ ವಿಷಯಗಳ ಬಗ್ಗೆ ವಿಮರ್ಶೆ ಮಾಡುವ ಶಕ್ತಿ ಹೆಚ್ಚು ಇರುವುದರಿಂದ ಈ ಕಾರ್ಯಕ್ರಮವನ್ನು ಮಕ್ಕಳಿಗಾಗಿಯೇ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಅರಿವಿಗಾಗಿ ಪುಸ್ತಕಗಳ ಪ್ರಕಟಣೆ:

ಮೌಢ್ಯ, ಮೂಢನಂಬಿಕೆ ಬಗ್ಗೆ ಅರಿವು ಮೂಡಲು ವಿದ್ಯಾರ್ಥಿಗಳಿಗಾಗಿ ರಾಜ್ಯ ವಿಜ್ಞಾನ ಪರಿಷತ್‍ನಿಂದ ಅನೇಕ ಪುಸ್ತಕಗಳನ್ನು ಹೊರತಂದಿದ್ದು ಅದನ್ನು ವಿದ್ಯಾರ್ಥಿಗಳು ಅಭ್ಯಸಿಸಬೇಕು. ಇಂದಿನ ದಿನಗಳಲ್ಲಿ ಮೂಲ ವಿಜ್ಞಾನ ಓದುವ ಆಸಕ್ತಿ ವಿದ್ಯಾರ್ಥಿಗಳಲ್ಲಿ ಕಡಿಮೆಯಾಗುತ್ತಿದ್ದು ಆ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಆರ್.ಮಂಜುನಾಥ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಿ ಆರ್ಥಿಕವಾಗಿ ಬೆಳೆದು ಕಲ್ಪನಾ ಚಾವ್ಲಾ ರೀತಿಯಲ್ಲಿ ಹೆಸರು ಗಳಿಸಬೇಕು ಎಂದು ತಿಳಿಸಿದರು. ರಾಜ್ಯ ವಿಜ್ಞಾನ ಪರಿಷತ್‍ನ ಸದಸ್ಯ ಟಿ.ಜಿ.ಕೃಷ್ಣಮೂರ್ತಿರಾಜ್ ಅರಸ್, ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಎಚ್.ಎಂ.ನೀಲಕಂಠಪ್ಪ, ಕಾರ್ಯದರ್ಶಿ ಟಿ.ತ್ಯಾಗರಾಜ್, ಸಪಪೂ ಕಾಲೇಜಿನ ಉಪಪ್ರಾಚಾರ್ಯ ಎಲ್.ಎಸ್.ಚಂದ್ರಶೇಖರ್, ವಿದ್ಯಾರ್ಥಿನಿ ಲಾಲಿತ್ಯ ಕಾರ್ಯಕ್ರಮದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net