

ಕೋಟ: ವಿಜ್ಞಾನ ನಮ್ಮ ಬದುಕಿನ ಪ್ರತಿ ಕ್ಷಣದಲ್ಲೂ ನಮ್ಮ ಪ್ರಜ್ಞೆ ಜಾಗೃತವಾಗಿರಿಸಿ, ವಿವೇಕವನ್ನು ಎಚ್ಚರವಾಗಿರಿಸಿ, ಪ್ರತಿಯೊಂದನ್ನೂ ಪ್ರಶ್ನಿಸಿ ತಿಳಿದುಕೊಳ್ಳುವ ಅಭ್ಯಾಸ ಬೆಳೆಸುತ್ತದೆ. ಹೆಸಕುತ್ತೂರು ಪ್ರಾಥಮಿಕ ಶಾಲೆ ವಿಜ್ಞಾನ ಹಬ್ಬ ಮಕ್ಕಳಲ್ಲಿ ಎಳವೆಯಲ್ಲಿಯೇ ವೈಜ್ಞಾನಿಕ ಮನೋಭಾವ ಮೂಡಿಸಲು ಪೂರಕ ಎಂದು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ಪ್ರಾಂಶುಪಾಲ ವಿಘ್ನೇಶ್ವರ ಭಟ್ ಹೇಳಿದರು.
ಹೆಸಕುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟೀಯ ವಿಜ್ಞಾನ ದಿನಾಚರಣೆ ಯುರೇಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ತಯಾರಿ ಸ್ಪರ್ಧೆ, ವಿದ್ಯಾರ್ಥಿಗಳೇ ತಮ್ಮ ಮನೆಗಳಿಂದ ಸಂಗ್ರಹಿಸಿ ತಂದ ಪ್ರಾಚ್ಯ ವಸ್ತುಗಳ ಪ್ರದರ್ಶನ, ನಾಣ್ಯ ಸಂಗ್ರಹ ಪ್ರದರ್ಶನ, ವಿವಿಧ ರೀತಿಯ ಪಕ್ಷಿಗಳ ಪರಿಚಯ ಹಾಗೂ ಹೂಗುಚ್ಛ ತಯಾರಿ ಸ್ಪರ್ಧೆ ಆಯೋಜಿಸಲಾಗಿತ್ತು. ಸರ್ಕಾರಿ ಪ್ರೌಢಶಾಲೆ ವಿಜ್ಞಾನ ಶಿಕ್ಷಕರಾದ ಉದಯ ಕುಮಾರ ಶೆಟ್ಟಿ, ವೆಂಕಟೇಶ ಮಂಜ ತೀರ್ಪುಗಾರರಾಗಿ ಸಹಕರಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣ ಕೆದ್ಲಾಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಶಿಕ್ಷಕ ಚಂದ್ರಶೇಖರ ಶೆಟ್ಟಿ ಕೆ.ಎನ್., ಸರ್ಕಾರಿ ಪ್ರೌಢಶಾಲೆ ಹೆಸಕುತ್ತೂರು ಮುಖ್ಯ ಶಿಕ್ಷಕ ಅಬ್ದುಲ್ ರವೂಫ್, ನಿವೃತ್ತ ಅಧ್ಯಾಪಕ ಜಯರಾಮ ಶೆಟ್ಟಿ, ಸಹಶಿಕ್ಷಕರಾದ ಸಂಜೀವ ಎಂ., ಜಯಲಕ್ಷ್ಮೀ ಬಿ., ವಿಜಯಾ ಆರ್., ರವೀಂದ್ರ ನಾಯಕ್, ಗೌರವ ಶಿಕ್ಷಕಿ ಮಧುರ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಶೇಖರ ಕುಮಾರ್ ಸ್ವಾಗತಿಸಿ, ವಿಜಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜ್ಞಾನ ಶಿಕ್ಷಕಿ ಸ್ವಾತಿ ಬಿ. ವಂದಿಸಿದರು. ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.