

ವಿಜಯಪುರ: ಸೂಕ್ತ ಮಾರ್ಗದರ್ಶನ ಹಾಗೂ ಪ್ರೇರಣೆ ಮತ್ತು ಉತ್ತಮ ಶಿಕ್ಷಣ ಸಿಕ್ಕರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಅಗಾಧ ಸಾಧನೆ ಮೆರೆಯಲು ಸಾಧ್ಯ. ಈ ನಿಟ್ಟಿನಲ್ಲಿ ವಿಜಯವಾಣಿ ಹಾಗೂ ಎಕ್ಸಲೆಂಟ್ ಸಮೂಹ ಶಿಕ್ಞಣ ಸಂಸ್ಥೆಗಳು ಸತತವಾಗಿ ಆಯೋಜಿಸುತ್ತಿರುವ "ಎಜುಕೇಶನ್ ಎಕ್ಸಪೋ"ದಂಥ ಮೇಳಗಳು ತುಂಬ ಸಹಕಾರಿ ಎಂದು ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಹೇಳಿದರು.
ಇಲ್ಲಿನ ಸಂಗನ ಬಸವ ಮಂಗಲ ಕಾರ್ಯಾಲಯದಲ್ಲಿ ಕನ್ನಡದ ನಂ.1 ದಿನ ಪತ್ರಿಕೆ ಹಾಗೂ ಪ್ರತಿಷ್ಠಿತ ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ದಿನದ ಶಿಕ್ಷಣ ಮೇಳಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಶ್ರಮಜೀವಿಗಳು, ಪ್ರಯತ್ನ ಶೀಲರು. ಅವರಿಗೆ ಸೂಕ್ತ ಮಾರ್ಗದರ್ಶನ ಬೇಕು. ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ನಡುವಿನ ತಾರತಮ್ಯ, ಕೀಳು- ಮೇಲರಿನೆ ಅಳಿಯಬೇಕು. ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಹ ಸಾಕಷ್ಟು ಪ್ರತಿಭಾವಂತರಿದ್ದಾರೆ. ಅವರಿಗೆ ಪ್ರೋತ್ಸಾಹ ಮತ್ತು ಮಾರ್ಗದರ್ಶನದ ಅವಶ್ಯಕತೆ ಇದೆ ಎಂದರು.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಬೇಕು. ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶಯ ಕೂಡ ಅದೇ ಆಗಿತ್ತು. ನಾವು ಮತ್ತು ನಮ್ಮ ಬಿಎಲ್ ಡಿಇ ಸಂಸ್ಥೆ ಕೂಡ ಆ ನಿಟ್ಟಿನಲ್ಲಿ ವ್ಯಾಪಕ ಕಾರ್ಯಕ್ರಮ, ಯೋಜನೆ ರೂಪಿಸುತ್ತಿದ್ದೇವೆ. ಅದಕ್ಕೆ ಪೂರಕವೆಂಬಂತೆ
ಅಗಸ್ತ್ಯ ಫೌಂಡೇಶನ್ ನೇತೃತ್ವದಲ್ಲಿ ಎಕ್ಸಪೋದಲ್ಲಿ ಆಯೋಜಿಸಿರುವ ವಿಜ್ಞಾನ ವಸ್ತು ಪ್ರದರ್ಶನ ತುಂಬ ಖುಷಿ ತಂದಿದೆ. ಅವರನ್ನೂ ಬಳಸಿಕೊಂಡು ಯೋಜನೆ ರೂಪಿಸಲಾಗುವುದು ಎಂದರು.
ಇತ್ತೀಚೆಗೆ ಜಾಗತಿಕ ಮಟ್ಟದ ಶೃಂಗಸಭೆಯಲ್ಲಿ ಭಾಗವಹಿಸಿದ್ದೆ. ಅಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದಂತೆ, ಪ್ರಪಂಚದ ಉಳಿವಿನ ಬಗ್ಗೆ, ಈ ಜಗತ್ತು ಸುಂದರಗೊಳಿಸುವ ನಿಟ್ಟಿನಲ್ಲಿವ ಸಾಕಷ್ಟು ಚರ್ಚೆಗಳಾದವು. ಆ ಚರ್ಚೆಗಳನ್ನು ಅನುಷ್ಟಾನಗೊಳಿಸಲು ಇಂಥ ಮೇಳಗಳು ಅವಶ್ಯಕ. ಈ ಪ್ರಪಂಚ ಸುಂದರವಾಗದಬೇಕಾದರೆ ಮಕ್ಕಳಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಹಾಗೂ ವೈಜ್ಞಾನಿಕ ಮನೋಭಾವ ಅವಶ್ಯ. ಆ ನಿಟ್ಟಿಲ್ಲಿ ಆಯೋಜಿಸುವ ಈ ಶಿಕ್ಷಣ ಮೇಳ ಸಫಲಗೊಳ್ಳಲಿ ಎಂದು ಆಶಿಸಿದರು.
ಕನ್ನೂರಿನ ಆಧ್ಯಾತ್ಮ ಚಿಂತಕರಾದ ಕೃಷ್ಣ ಸಂಪಗಾಂವಕರ, ಇಸ್ರೋದ ಹಿರಿಯ ವಿಜ್ಞಾನಿ ವಿಲಾಸ ರಾಠೋಡ, ಶಿವಾನಂದ ಕೆಲೂರ, ಬಸವರಾಜ ಕವಲಗಿ, ಕಾಂತಾ ನಾಯಕ ಮತ್ತಿತರರಿದ್ದರು.