ರೈತರ ಬೆಳೆಗಳಿಗೆ ಏಕಿಲ್ಲ ವೈಜ್ಞಾನಿಕ ಬೆಲೆ ?

DSC_0837-09
Published on

ಚಿತ್ರದುರ್ಗ

ಆರೋಗ್ಯಕ್ಕೆ ಹಾನಿಕಾರಕವಾದ ವಸ್ತುಗಳಿಗೆ ನಿರ್ಧಿಷ್ಟ ಬೆಲೆ ಇದೆ.ಆದರೆ ಆರೋಗ್ಯಕ್ಕೆ ಪೂರಕವಾದ ಬೆಳೆಗಳಿಗೆ ಏಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿಲ್ಲ ಎಂದು ಚಿಂತಕ ಜೆ.ಯಾದವರೆಡ್ಡಿ ಪ್ರಶ್ನಿಸಿದರು.

ಸಿಟಿಜನ್ ಫಾರ್ ಡೆಮಾಕ್ರಸಿ ಜನತಂತ್ರ ಪ್ರಯೋಗ ಶಾಲೆ, ಜನಾಂದೋಲನ ಮಹಾಮೈತ್ರಿ ಹಾಗೂ ಸಂಯುಕ್ತ ಹೋರಾಟ ಆಯೋಜಿಸಿರುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಉದ್ದೇಶಿಸಿ ಸೋಮವಾರ ಮಾತನಾಡಿದರು.

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಜನರು ನೆಮ್ಮದಿಯಿಂದ ಬದುಕಲು ಆಗುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಏರುತ್ತಲೇ ಇದೆ. 95 ಲಕ್ಷ ಕೋಟಿ ರೂ. ಸಾಲ ಮಾಡಿರುವ ಕೇಂದ್ರ ಸರ್ಕಾರ ದೇಶವನ್ನು ದಿವಾಳಿಯೆಬ್ಬಿಸಲು ಹೊರಟಿದೆ. ಇದನ್ನು ಪ್ರಶ್ನಿಸುವವರನ್ನು ಜೈಲಿಗೆ ಕಳುಹಿಸಲಾಗುತ್ತಿದೆ, ನಿಜಕ್ಕೂ ಇದು ದೊಡ್ಡ ದುರಂತ ಎಂದರು.

ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ, ರೈತರು ಹಾಗೂ ದುಡಿವ ವರ್ಗಕ್ಕೆ ಕೇಂದ್ರ ಸರ್ಕಾರ ಸುಳ್ಳು ಹೇಳಿ ವಂಚಿಸುತ್ತಿದೆ. ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಮುಖಂಡರಾದ ಟಿ.ನುಲೇನೂರು ಎಂ.ಶಂಕರಪ್ಪ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಬಸ್ತಿಹಳ್ಳಿ ಜಿ.ಸುರೇಶ್‌ಬಾಬು, ಕೆ.ಪಿ.ಭೂತಯ್ಯ, ಧನಂಜಯ ಹಂಪಯ್ಯನಮಾಳಿಗೆ, ನಾಗರಾಜ್ ಮುದ್ದಾಪುರ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಿ.ಒ.ಶಿವಕುಮಾರ್, ತಿಪ್ಪೇಸ್ವಾಮಿ, ಎಂ.ಲಕ್ಷ್ಮಿಕಾಂತ್, ಜೆ.ಕೆ.ಕುಮಾರಸ್ವಾಮಿ, ರವಿಕುಮಾರ್, ಕನಕ ಶಿವಮೂರ್ತಿ, ಭಾನು, ಕುಮುದಾ ಇತರರಿದ್ದರು.

* ಚಿತ್ರದುರ್ಗಕ್ಕೆ ಯಾತ್ರೆ *

ಕೂಡಲಸಂಗಮದಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನದವರೆಗೆ ಹಮ್ಮಿಕೊಂಡಿರುವ ಸಮಾಜ ಪರಿವರ್ತನಾ ಸತ್ಯಾಗ್ರಹ ಯಾತ್ರೆ ಸೋಮವಾರ ಚಿತ್ರದುರ್ಗದ ರೈತಭವನಕ್ಕೆ ಆಗಮಿಸಿತು. ಅಲ್ಲಿಂದ ಒನಕೆ ಓಬವ್ವ ವೃತ್ತದವರೆಗೂ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net