

ನರಗುಂದ: ಹಾಲಿನ ಉತ್ಪಾದನೆ, ಶೇಖರಣೆ, ಸಂಸ್ಕರಣೆ, ಮಾರಾಟ ವ್ಯವಸ್ಥೆಗಳನ್ನು ಕೆಎಂಎಫ್ ವೈಜ್ಞಾನಿಕವಾಗಿ ನಿರ್ವಹಿಸುತ್ತಿದೆ ಎಂದು ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾ ಮಂಡಳ ನಿರ್ದೇಶಕ ಎಚ್.ಜಿ.ಹಿರೇಗೌಡ್ರ ಹೇಳಿದರು.
ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಗದಗ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಕೆ.ಎಂ.ಎಫ್. ಗದಗ-ಧಾರವಾಡ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರು, ಹಾಲು ಪರೀಕ್ಷಕರಿಗೆ ತಾಪಂ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಹಕಾರ ಸಂಘಗಳಿಗೆ, ಕಟ್ಟಡಕ್ಕಾಗಿ ಬಡ್ಡಿರಹಿತ ಸಾಲ, ಆಕಳು ಸಾಲ 46000 ರೂ.ವರೆಗೆ ಹೆಚ್ಚಿಸಲಾಗಿದ್ದು ಪ್ರಶಂಸನೀಯ ಎಂದರು.
ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿಯೂ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದು, ತಳಿ ಅಭಿವೃದ್ಧಿ, ಹಸಿರು ಮೇವು ಮತ್ತು ಸಮತೋಲಿನ ಪಶು ಆಹಾರ ಉತ್ಪಾದನೆ, ಪಶು ವೈದ್ಯಕೀಯ ಸೇವೆ, ಹಾಲು ಶೇಖರಣೆ ಹೀಗೆ ಎಲ್ಲ ಹಂತಗಳಲ್ಲಿ ಆಧುನಿಕ ತಂತ್ರಜ್ಞಾನದ ಉಪಯೋಗವನ್ನು ವಿಸ್ತರಿಸಿಕೊಳ್ಳಲಾಗಿದೆ. ಹಾಲನ್ನು ಶೇಖರಿಸಿದ ನಂತರ ಅದರ ಸಂಸ್ಕರಣೆ, ಹಾಲಿನ ಉತ್ಪನ್ನಗಳೊಂದಿಗೆ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಲ್ಲಿಯೂ ತಂತ್ರಜ್ಞಾನವನ್ನು ಡೇರಿ ಕ್ಷೇತ್ರವು ಅಳವಡಿಸಿಕೊಂಡಿದೆ ಎಂದರು.
ಗದಗ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ವೈ.ಎಫ್. ಪಾಟೀಲ ಮಾತನಾಡಿ, ಡಿಜಿಟಲ್ ತಂತ್ರಜ್ಞಾನವು ಇತರೆ ಕ್ಷೇತ್ರಗಳಂತೆಯೇ ಹೈನೋದ್ಯಮ ಕ್ಷೇತ್ರಕ್ಕೂ ವರವಾಗಿ ಪರಿಣಮಿಸಿದೆ. ರೈತರು ಉತ್ಪಾದಿಸುವ ಹಾಲಿನ ಪರೀಕ್ಷೆ, ದಾಖಲೆ ಸಂಗ್ರಹದಿಂದ ಆರಂಭವಾಗಿ ರೈತರಿಗೆ ಹಣ ಪಾವತಿ, ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಅಂತಿಮ ಗ್ರಾಹಕರಿಗೆ ಮಾರಾಟ ಮಾಡುವ ಪ್ರಕ್ರಿಯೆವರೆಗೆ ಈ ಡಿಜಿಟಲ್ ತಂತ್ರಜ್ಞಾನದ ಕಾರ್ಯಚಟುವಟಿಕೆ ವಿಸ್ತರಿಕೊಂಡಿದೆ. ಕೆಎಂಎಫ್‌ನ ಆಡಳಿತ, ದಕ್ಷತೆ, ಶಿಸ್ತು, ಸಹಕಾರಿ ತತ್ವದಲ್ಲಿನ ನಂಬಿಕೆ ವಿಶ್ವಾಸ ಅದರ ಸಾಧನೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ಸಹಕಾರ ಸಂಘಗಳ ಉಪನಿಬಂಧಕಿ ಎಸ್.ಎಸ್. ಕಬಾಡೆ, ಸಹಾಯಕ ನಿಬಂಧಕಿ ಪುಷ್ಪಾ ಕಡಿವಾಳ, ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ ನವಲಗುಂದ, ಧಾರವಾಡ ಹಾಲು ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಪ್ರಸನ್ನ ಪಟ್ಟೇದ ಉಪಸ್ಥಿತರಿದ್ದರು.
ಡಾ. ವೀರೇಶ ತರಲಿ, ಡಾ. ಎಂ.ಬಿ.ಮಡಿವಾಳರ, ಎಂ.ಬಿ. ಪಾಟೀಲ ವಿಶೇಷ ಉಪನ್ಯಾಸ ನಿಡಿದರು. ಎಸ್. ಎಸ್. ಹುಚ್ಚನಗೌಡ್ರ ಪ್ರಾರ್ಥಿಸಿದರು. ಚಂದ್ರಶೇಖರ ಕರಿಯಪ್ಪನವರ, ದಿಲೀಪ ನದಾಫ್ ನಿರ್ವಹಿಸಿದರು.