ತನಿಖೆಯಲ್ಲಿ ವೈಜ್ಞಾನಿಕ ಪುರಾವೆಗಳು ಮುಖ್ಯ

mysore
Published on

ಮೈಸೂರು: ಯಾವುದೇ ತನಿಖೆಯಲ್ಲಿ ಮೌಖಿಕ ಪುರಾವೆಗಳಿಗಿಂತ ವೈಜ್ಞಾನಿಕ ಪುರಾವೆಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ.ಬೋರಲಿಂಗಯ್ಯ ಹೇಳಿದರು.


ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ದಕ್ಷಿಣ ವಲಯ ಮಟ್ಟದ ಕರ್ತವ್ಯ ಕೂಟದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ತನಿಖೆಯಲ್ಲಿ ವೈಜ್ಞಾನಿಕ ಸಾಕ್ಷಿಗಳ ಸಂಗ್ರಹದ ಕುರಿತು ತನಿಖಾ ಸಿಬ್ಬಂದಿ ಹೆಚ್ಚಿನ ಆಸಕ್ತಿ ತೋರಬೇಕು. ಅದಕ್ಕಾಗಿ ಅಧ್ಯಯನ ಸಹ ಮಾಡಬೇಕು ಎಂದರು.


ಯಾವುದೇ ತನಿಖೆಯಾಗಲಿ ಹೆಚ್ಚಿನ ಆಸಕ್ತಿಯಿಂದ ಕಾರ್ಯ ನಿರ್ವಹಿಸಬೇಕು. ಅದಕ್ಕಾಗಿ ಶ್ವಾನ ದಳವನ್ನು ಅಪರಾಧ ಘಟನಾ ಜಾಗದಲ್ಲಿ ಪರಿಶೀಲನೆಗೆ ಬಳಸಿಕೊಳ್ಳಬೇಕು. ಫೋಟೋಗಳು, ಡಿಎನ್‌ಎ, ಬೆರಳಚ್ಚು ಇನ್ನಿತರ ಮಾದರಿಗಳನ್ನು ಸಂಗ್ರಹಿಸಬೇಕು. ವೈಜ್ಞಾನಿಕ ಸಾಕ್ಷಿಗಳನ್ನೂ ಕಲೆ ಹಾಕಬೇಕು. ಇದನ್ನು ತನಿಖಾ ಸಿಬ್ಬಂದಿ ಶಿಸ್ತುಬದ್ಧವಾಗಿ ಕಲಿಯಬೇಕು ಎಂಬುದು ಕರ್ತವ್ಯಕೂಟದ ಉದ್ದೇಶ ಎಂದು ತಿಳಿಸಿದರು.


ಯಾವುದೇ ಒಂದು ಪ್ರಕರಣ ತೆಗೆದುಕೊಂಡಾಗ ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಬೇಕು. ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಕ್ರಮಬದ್ಧವಾಗಿ ಸಲ್ಲಿಸಬೇಕು. ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ತನಿಖಾ ವರದಿಯನ್ನು ಮಂಡಿಸಬೇಕು. ಇದು ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲು ಪೂರಕವಾಗಲಿದೆ ಎಂದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್, ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ, ಪೊಲೀಸ್ ಅಧಿಕಾರಿ ಎಸ್.ನಾಗೇಶ್ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net