ಧಾರ್ಮಿಕ ಆಚರಣೆಗಳಲ್ಲಿ ವೈಜ್ಞಾನಿಕ ಅಂಶ ಅಡಕ

FotoJet
Published on

ಎಲೆರಾಂಪುರ ಕುಂಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಹೇಳಿಕೆ

ಕೊರಟಗೆರೆ: ನಮ್ಮ ದೇಶದ ಧಾರ್ಮಿಕ ಆಚರಣೆಗಳ ಪಾರಂಪರ್ಯವು ಕೇವಲ ಭಕ್ತಿ ಮತ್ತು ಆಚರಣೆಗಳಲ್ಲದೇ, ಅದರಲ್ಲಿ ಅನೇಕ ವೈಜ್ಞಾನಿಕ ಅಂಶಗಳೂ ಅಡಗಿವೆ. ಅದನ್ನು ಜನರು ತಿಳಿಯಬೇಕು ಎಂದು ಎಲೆರಾಂಪುರ ಕುಂಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ತಿಳಿಸಿದರು.ಪಟ್ಟಣದ ಕಳೆದಸ ಬಡಾವಣೆಯ ಬಳಿಯ ಗುಡ್ಡದಲ್ಲಿರುವ ಗುಡ್ಡದ ವೀರಾಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನೂತನ ನಾಗದೇವತೆ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಹಳೆಯ ಕಾಲದಲ್ಲಿ ಊರಿನ ದೇವಾಲಯಗಳನ್ನು ಹೊರವಲಯದ ಗುಡ್ಡ, ಬೆಟ್ಟಗಳಲ್ಲಿ ನಿರ್ಮಿಸುತ್ತಿದ್ದ ಸಂಪ್ರದಾಯವನ್ನು ಉಲ್ಲೇಖಿಸಿ, ಜನರು ನಡೆದುಕೊಂಡು ಬಂದು ಪೂಜೆ ಸಲ್ಲಿಸಿದರೆ ದೈಹಿಕವಾಗಿ ತೇಜಸ್ಸು ಹೆಚ್ಚುತ್ತದೆ. ಅಲ್ಲದೆ, ಪ್ರಕೃತಿಯ ಮಡಿಲಲ್ಲಿ ಶುದ್ಧ ಗಾಳಿ ಸೇವಿಸಿದರೆ ಮಾನಸಿಕ ನೆಮ್ಮದಿ ದೊರೆಯುತ್ತದೆ. ಆದರೆ, ಇಂದಿನ ಜನರು ದೇವಾಲಯದ ಮುಂಭಾಗದವರೆಗೂ ವಾಹನ ತೆಗೆದುಕೊಂಡು ಹೋಗಬೇಕೆಂದು ಬಯಸುತ್ತಾರೆ. ಈ ಮನೋಭಾವವೇ ದೈಹಿಕ ಶಕ್ತಿಯನ್ನು ಕುಗ್ಗಿಸುತ್ತಿದೆ. ಇಂದಿನ ಯುವಕರೂ ಈ ದಾರಿಯನ್ನು ಹಿಡಿದಿರುವುದು ಚಿಂತಾಜನಕ ಎಂದರು.ಪ್ರಸ್ತುತ ಸಮಾಜದಲ್ಲಿ ಧರ್ಮವನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾವು ಧರ್ಮ ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ. ಆದರೆ, ಧರ್ಮವನ್ನು ರ್ನಿಲಕ್ಷಿಸಿದರೆ ಅದೊರಡನೆ ನಾವು ಸಹ ನಾಶದ ದಾರಿಯಲ್ಲಿ ಸಾಗುತ್ತೇವೆ ಎಂದು ಎಚ್ಚರಿಸಿದರು.ಪಟ್ಟಣದ ಭಕ್ತರು ಒಟ್ಟುಗೂಡಿ, ಬೆಟ್ಟ-ಗುಡ್ಡಗಳಲ್ಲಿ ವೀರಾಂಜನೇಯ ಸ್ವಾಮಿ ಹಾಗೂ ರಂಗನಾಥಸ್ವಾಮಿ ದೇವಾಲಯಗಳೊಂದಿಗೆ ನಾಗದೇವತೆಗಳ ಪ್ರತಿಷ್ಠಾಪನೆ ಮಾಡಿ, ಸುತ್ತಮುತ್ತ ಗಿಡಮರಗಳನ್ನು ಬೆಳೆಸುವ ಮೂಲಕ ಸುಂದರ ಪರಿಸರ ನಿರ್ಮಿಸಿರುವುದನ್ನು ಸ್ವಾಮೀಜಿ ಶ್ಲಾಘಿಸಿದರು.ಟ್ರಸ್ಟಿಗಳಾದ ಪುಟ್ಟಣ, ನಾಗರಾಜು, ಬೈರಪ್ಪ, ಬೊಮ್ಮಣ್ಣ, ರವಿಕುಮಾರ್​, ದಾನಿಗಳಾದ ರಾಜರಾಜೇಶ್ವರಿ, ಮುಖಂಡರಾದ ಗಟ್ಲಹಳ್ಲಿ ಕುಮಾರ್​, ಕಾಂತರಾಜು, ಶರಣಪ್ಪ, ರಮೇಶ್​, ಮಂಜುನಾಥ್​, ಕಿರಣ್​ ಕುಮಾರ್​, ಅಣ್ಣಪ್ಪ, ನಮೀನ್​ ಕುಮಾರ್​, ಆದಿತ್ಯರಾಜ್​, ದಿನೇಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net