

ಮಂಡ್ಯ: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ರಾಜ್ಯ ಖಾಸಗಿ ಶಾಲಾ ಕಾಲೇಜು ಆಡಳಿತ ಮಂಡಳಿ ಒಕ್ಕೂಟ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ವತಿಯಿಂದ ಡಿ.28 ಮತ್ತು 29ರಂದು ರಾಜ್ಯಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆಂಪರಾಜು ತಿಳಿಸಿದರು.
ಬೆಂಗಳೂರು ಯಲಹಂಕ ತಾಲೂಕು ಬಾಗಲೂರಿನ ವಿ.ಜೆ.ಇಂಟರ್‌ನ್ಯಾಷನಲ್ ಶಾಲಾ ಮೈದಾನದಲ್ಲಿ ಆಯೋಜಿಸಿರುವ ಸಮ್ಮೇಳನವನ್ನು 28ರಂದು ಬೆಳಗ್ಗೆ 8ಗಂಟೆಗೆ ರಾಷ್ಟ್ರಧ್ವಜ, ನಾಡಧ್ವಜ, ಪರಿಷತ್ ಧ್ವಜಾರೋಹಣ, ರಾಷ್ಟ್ರಗೀತೆ, ನಾಡಗೀತೆ ಹಾಡಲಾಗುವುದು. 9ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬೆಳಗ್ಗೆ 10.30ಕ್ಕೆ ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸಮ್ಮೇಳನಾಧ್ಯಕ್ಷರಿಗೆ ಗೌರವ ಸಲ್ಲಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಸಮ್ಮೇಳನಾಧ್ಯಕ್ಷೆ ಎಂಎಲ್‌ಸಿ ಉಮಾಶ್ರೀ ಮಾತನಾಡಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಗೋಷ್ಠಿ-1 ರಲ್ಲಿ ’ನಮ್ಮ ಸಂವಿಧಾನ ನಮ್ಮ ಹಕ್ಕು’ ವಿಷಯ, ಸಂಜೆ 4ಕ್ಕೆ ಗೋಷ್ಠಿ-2 ರಲ್ಲಿ ’ಪ್ರಸ್ತುತ ರೈತರ ಬವಣೆಗಳು’,’ಪ್ರಸ್ತುತ ಶೈಕ್ಷಣಿಕ ತಲ್ಲಣಗಳು’,’ಅಂಗೈಯಲ್ಲಿ ಆರೋಗ್ಯ’ ವಿಷಯವಾಗಿ ಚರ್ಚೆ ನಡೆಯಲಿವೆ. ಸಂಜೆ 6ಕ್ಕೆ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 7ಕ್ಕೆ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನಡೆಯಲಿವೆ ಎಂದರು.
29ರಂದು ಬೆಳಗ್ಗೆ 9ಕ್ಕೆ ವಿಶ್ವಮಾನವ ಕುವೆಂಪು ವೇದಿಕೆಯಲ್ಲಿ ಪರಿಷತ್‌ನ ಮಹಾಧಿವೇಶನ ನಡೆಯಲಿದೆ. 10.30ಕ್ಕೆ ವಿಶ್ವಮಾನವ ದಿನಾಚರಣೆ ಮತ್ತು ಪ್ರತಿಜ್ಞಾ ವಿಧಿ ಪ್ರಮಾಣ ನಡೆಯಲಿದೆ. 11.30ಕ್ಕೆ ’ಸೀ ಮನದ ತಲ್ಲಣಗಳು’,’ಸೈಬರ್ ಸುರಕ್ಷತೆ’’ ವಿಚಾರ ಗೋಷ್ಠಿ, ಮಧ್ಯಾಹ್ನ 2ಕ್ಕೆ ರಾಜ್ಯಮಟ್ಟದ ಎಚ್.ಎನ್.ಪ್ರಶಸ್ತಿ ಪ್ರದಾನ ಸಮಾರಂಭ, ಸಂಜೆ 3.30ಕ್ಕೆ ಮಹಿಳಾ ಸಾಧಕರಿಗೆ ರಾಜ್ಯಮಟ್ಟದ ಚೈತನ್ಯಶ್ರೀ ಪ್ರಶಸ್ತಿ ಪ್ರದಾನ, 5ಕ್ಕೆ ಸಮಾರೋಪ ಸಮಾರಂಭ, 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ ಎಂದು ಮಾಹಿತಿ ನೀಡಿದರು.
ಪರಿಷತ್ ಜಿಲ್ಲಾಧ್ಯಕ್ಷ ಚಿಕ್ಕರಸಿನಕೆರೆ ಶಿವಲಿಂಗಯ್ಯ, ಉಪಾಧ್ಯಕ್ಷ ಗುರುಮೂರ್ತಿ, ಸಂಘಟನಾ ಕಾರ್ಯದರ್ಶಿ ವಸಂತಮ್ಮ, ದೊಡ್ಡಲಿಂಗರಾಜು, ಖಜಾಂಚಿ ಜಯರಾಂ, ನಿರ್ದೇಶಕ ವೆಂಕಟಾಚಲಯ್ಯ, ಮಹೇಂದ್ರ, ಜಯರಾಮು ಇದ್ದರು.