

ಮೈಸೂರು: ಹಾವುಗಳ ಕುರಿತು ವೈಜ್ಞಾನಿಕವಾಗಿ ಜಾಗೃತಿ ಮೂಡಿಸುವ ಅಗತ್ಯ ಇದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.
ಅಡವಿ ಅಲರ್ಟ್ ಫೌಂಡೇಷನ್ ವತಿಯಿಂದ ‘ಉರಗ ತರಂಗ’ ಮತ್ತು ‘ಸ್ನೇಕ್ ಆಫ್ ಮೈಸೂರು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಾವಿನ ಕುರಿತು ಜನಸಾಮಾನ್ಯರಿಗೆ ಭಯ ಇದೆ, ಇದು ಒಳ್ಳೆಯದು. ಈ ರೀತಿಯ ಭಯದಿಂದ ವನ್ಯಜೀವಿಗಳ ಸಂರಕ್ಷಣೆ ಮತ್ತು ಕಾಳಜಿ ಸಹ ಮೂಡಲಿದೆ ಎಂದರು.
ಹಾವುಗಳ ಸಂರಕ್ಷಣೆ ಮಾಡುವ ಸ್ನೇಕ್ ಶ್ಯಾಮ್ ಮೈಸೂರಿಗೆ ಚಿರಪರಿಚಿತರು. ನಾನು ಚಿಕ್ಕಹುಡುಗನಾಗಿದ್ದಾಗ ಜಯಲಕ್ಷ್ಮೀಪುರಂನಲ್ಲಿರುವ ನಮ್ಮ ಮನೆಯಲ್ಲಿ ಹಾವು ಬಂದಿತ್ತು. ಆಗ ಸ್ನೇಕ್ ಶ್ಯಾಮ್ ಬಂದಿದ್ದರು. ಇದು ನನಗೆ ಮೊದಲ ಅನುಭವ. ಇತ್ತೀಚಿನ ವರ್ಷದಲ್ಲಿ ಅರಮನೆಯಲ್ಲಿ ಹಾವು ಬಂದಿತ್ತು. ನನ್ನ ಮಗನಿಗೆ ಮೊದಲ ಹಾವಿನ ಅನುಭವವಾಯಿತು. ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ರೀತಿಯಲ್ಲಿ ಹಾವಿನ ಅನುಭವಗಳಾಗಿವೆ ಎಂದರು.
ವನ್ಯ ಸಂಪತ್ತು ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ವನ್ಯಜೀವಿಗಳೊಂದಿಗೆ ಬದುಕುವುದನ್ನು ಕಲಿಯಬೇಕಾಗಿದೆ. ಅದಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ ಎಂದರು.
ನಗರೀಕರಣ ತ್ವರಿತವಾಗಿ ಬೆಳೆಯುತ್ತಿದೆ. ಇದರಿಂದ ಪರಿಸರ, ಕಾಡು ನಾಶವಾಗುತ್ತಿದೆ. ಇದರ ಫಲವಾಗಿ ವ್ಯತರಿಕ್ತ ಪರಿಣಾಮವನ್ನು ಎದುರಿಸುವಂತಾಗಿದೆ ಎಂದರು.
ಮೈಸೂರು ನಗರಕ್ಕೆ ಹೊಂದಿಕೊಂಡಿರುವ ಚಾಮುಂಡಿಬೆಟ್ಟ ಜೀವ ವೈವಿಧ್ಯದಿಂದ ಕೂಡಿದೆ. ಚಿರತೆ, ಹಾವುಗಳು ಸೇರಿದಂತೆ ಇನ್ನಿತರ ವನ್ಯಪ್ರಾಣಿಗಳಿಗೆ ಆವಾಸ ಸ್ಥಾನವಾಗಿದೆ. ಅವುಗಳಿಂದ ನಗರವಾಸಿಗಳಿಗೆ ತೊಂದರೆಯಾಗಿಲ್ಲ. ಅಲ್ಲೊಂದು ಇಲ್ಲೊಂದು ಸಣ್ಣಪುಟ್ಟ ಘಟನೆಗಳು ನಡೆದಿರಬಹುದು. ಆದರೆ, ಅವುಗಳಿಂದ ಮನುಷ್ಯರಿಗೆ ಆಪತ್ತು ಎದುರಾಗಲಿಲ್ಲ. ಆದ್ದರಿಂದ ಅವುಗಳ ಪಾಡಿಗೆ ಬಿಟ್ಟರೆ ಏನು ಅನಾಹುತವಾಗುವುದಿಲ್ಲ ಎಂಬುದಕ್ಕೆ ಇದುವೇ ಸಾಕ್ಷಿ ಎಂದರು.
ನಮ್ಮ ಪೂರ್ವಜರು ಪ್ರಕೃತಿಯೊಂದಿಗೆ ಜೀವನ ಸಾಗಿಸಿದರು. ಅದೇ ರೀತಿ ನಾವುಗಳು ಸಾಗಬೇಕು. ಅರಣ್ಯ, ಪರಿಸರ, ವನ್ಯಜೀವಿಗಳಿಗೆ ಪೂರಕವಾಗಿ ಅಭಿವೃದ್ಧಿಯನ್ನು ಕೈಗೊಳ್ಳಬೇಕು. ಅದಕ್ಕೆ ವಿರುದ್ಧವಲ್ಲ. ಪಾರಂಪರಿಕತೆ, ಪ್ರಾಕೃತಿಕ ಕಾಳಜಿಯೊಂದಿಗೆ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕು ಎಂದು ಹೇಳಿದರು.
ಉರಗ ತಜ್ಞ ಸ್ನೇಕ್ ಶ್ಯಾಮ್ ಮಾತನಾಡಿ, ಹಾವು ಕಡಿದ ತಕ್ಷಣ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಬೇಕು. ಅದನ್ನು ಬಿಟ್ಟು ಮಂತ್ರ- ತಂತ್ರಗಳ ಮೊರೆಹೋಗಬಾರದು. ಇದರಿಂದ ಜೀವಕ್ಕೆ ಆಪತ್ತು ಬರಲಿದೆ. ವ್ಯಕ್ತಿ ಸಾಯುವ ಸಾಧ್ಯತೆ ಹೆಚ್ಚು. ನನಗೂ ನಾಲ್ಕು ಸಲ ಹಾವು ಕಡಿದಿತ್ತು. ತಕ್ಷಣ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೆ. ಹೀಗಾಗಿ, ಈ ವಿಷಯದಲ್ಲಿ ನಿರ್ಲಕ್ಷೃ ಮಾಡಬೇಡಿ ಎಂದರು.
ಕೃತಿಗಳ ಲೇಖಕ ಪವನ್ ಜೋಶಿ ಮಾತನಾಡಿ, ಹಾವಿನ ಕುರಿತು ಭಯ, ಆತಂಕ ಬೇಡ. ಅದು ಕಡಿದ ತಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದರು.
ಶಾಸಕ ಟಿ.ಎಸ್.ಶ್ರೀವತ್ಸ, ವನ್ಯಜೀವಿ ಛಾಯಾಗ್ರಾಹಕ ಜೆ.ಎಸ್.ಅಮೋಘವರ್ಷ, ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ಮೈಸೂರು ಸಾಹಿತ್ಯ ಸಂಭ್ರಮದ ಸಂಸ್ಥಾಪಕ ಶುಭಾ ಸಂಜಯ್ ಅರಸ್ ಇನ್ನಿತರರಿದ್ದರು.