ಡಿ.28,29ಕ್ಕೆ ಬಾಗಲೂರಿನಲ್ಲಿ ರಾಜ್ಯಮಟ್ಟದ 4ನೇ ವೈಜ್ಞಾನಿಕ ಸಮ್ಮೇಳನ

science summit
Published on

ಮಡಿಕೇರಿ:

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಬೆಂಗಳೂರು ಶೈಕ್ಷಣಿಕ ಜಿಲ್ಲೆ, ಕರ್ನಾಟಕ ರಾಜ್ಯ ಖಾಸಗಿ ಶಾಲಾ ಕಾಲೇಜುಗಳ ಒಕ್ಕೂಟ, ಕರ್ನಾಟಕ ರಾಜ್ಯ ಮಾನವ ಬಂಧುತ್ವ ವೇದಿಕೆ, ಕರ್ನಾಟಕ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಹಯೋಗದಲ್ಲಿ ಡಿ. 28 ಮತ್ತು 29ರಂದು ಬಾಗಲೂರಿನ ವಿಜೆ ಇಂಟರ್ನ್ಯಾಷನಲ್ ಶಾಲಾ ಮೈದಾನದಲ್ಲಿ ರಾಜ್ಯಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ತಿಳಿಸಿದ್ದಾರೆ.

ನಾಡಿನ ಹೆಸರಾಂತ ರಂಗಭೂಮಿ ಕಲಾವಿದೆ ಉಮಾಶ್ರೀ ಅವರನ್ನು ಸಮ್ಮೇಳನದ ಸರ್ವಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನ ಉದ್ಘಾಟಿಸುವರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಗಣ್ಯರು ಭಾಗವಹಿಸುವರು. ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯುವ ಸಮ್ಮೇಳನಕ್ಕೆ ಪ್ರತಿ ಜಿಲ್ಲೆಯಿಂದಲೂ ತಲಾ 100 ಜನ ಪ್ರತಿನಿಧಿಗಳು ಆಗಮಿಸಲಿದ್ದಾರೆ. 30 ಸಾವಿರಕ್ಕೂ ಹೆಚ್ಚು ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸುವರು. ವಿಜ್ಞಾನ ವಸ್ತು ಪ್ರದರ್ಶನ, ವೈವಿಧ್ಯಮಯವಾದ ಆಹಾರಮೇಳ, ಕರಕುಶಲ ವಸ್ತು ಪ್ರದರ್ಶನ ಮೊದಲಾದ ವಸ್ತು ಪ್ರದರ್ಶನಗಳನ್ನು ಆಯೋಜಿಸಿಸಲಾಗಿದೆ. ಎರಡು ದಿನ ನಡೆಯುವ ಸಮ್ಮೇಳನದಲ್ಲಿ ಬುದ್ಧನ ಬೆಳಕು ಮತ್ತು ಕೆಂಪೇಗೌಡ ನಾಟಕ ಪ್ರದರ್ಶನವಾಗಲಿವೆ. ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನಾಲ್ಕು ವಿಚಾರಗೋಷ್ಠಿಗಳು ನಡೆಯಲಿವೆ. ವಿಶೇಷವಾಗಿ ಪರಿಷತ್ತಿನ ಮಹಾ ಅಧಿವೇಶನ ಆಯೋಜಿಸಲಾಗಿದೆ ಎಂದು ಮಂಗಳವಾರ ಕೊಡಗಿನ ಕುಶಾಲನಗರದಲ್ಲಿ ಪರಿಷತ್ತಿನ ಕಾರ್ಯಕಾರಿ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಜ್ಞಾನ ಪ್ರಕಾಶ ಸ್ವಾಮೀಜಿ ಮೈಸೂರು, ಬಿ ಆರ್ ಪಾಟೀಲ್, ಮೋಹನ್ ಆಳ್ವ, ಮಹಾಂತೇಶ್ ಗೌಡ ಪಾಟೀಲ್, ಲೀಲಾದೇವಿ ಆರ್ ಪ್ರಸಾದ್, ಶಿವ ಚಿತ್ತಪ್ಪ, ಡಾ. ಎಚ್. ಎಸ್. ಅನುಪಮಾ, ಕೆ ಶರೀಫ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಎಂ. ಎನ್. ಆಶಾದೇವಿ ಇವರಿಗೆ ರಾಜ್ಯಮಟ್ಟದ ಜೀವಮಾನ ಸಾಧನೆ ಪ್ರಶಸ್ತಿ ಮತ್ತು ಪ್ರತಿ ಜಿಲ್ಲೆಗೆ ಒಬ್ಬರಂತೆ 37 ಜನರಿಗೆ ಎಚ್‌ಎನ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವನ್ನು ಮಹಿಳಾ ಕೇಂದ್ರಿತವಾಗಿ ವಿಭಿನ್ನವಾಗಿ ಆಯೋಜಿಸಲಾಗುತ್ತಿದೆ. ಈ ಸಮ್ಮೇಳನಕ್ಕೆ ಹೊರ ಜಿಲ್ಲೆಯಿಂದ ಬರುವವರಿಗೆ ವಸತಿ ವ್ಯವಸ್ಥೆ ಮಾಡಲಾಗಿದ್ದು ಭಾಗವಹಿಸಿದ ಎಲ್ಲರಿಗೂ ಎರಡು ದಿನಗಳ ಕಾಲ ಊಟ ಉಪಹಾರ ಒದಗಿಸಲಾಗುತ್ತದೆ ಎಂದರು.

ಪರಿಷತ್ತಿನ ಪ್ರಮುಖರಾದ ಡಾ. ಆಂಜನಪ್ಪ ವೈ.ಎನ್., ಶಂಕರೇಗೌಡ, ಡಾ. ಶ್ರೀರಾಮಚಂದ್ರಪ್ಪ, ಗೌರಿ ಪ್ರಸನ್ನ, ಸುಧಾಚಣ್ಣನವರ್, ಡಾ.ಉಶಾದೇವಿ, ಡಾ. ಚಿಕ್ಕಹನುಮಂತೇ ಗೌಡ, ಎಸ್. ವೈ. ಹೊಂಬಾಳ್, ವಿ.ಟಿ.ಸ್ವಾಮಿ, ಕೊಡಗು ಜಿಲ್ಲಾಧ್ಯಕ್ಷೆ ವನಿತಾ ಚಂದ್ರಮೋಹನ್ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net