

ಮೈಸೂರು: ವಿಜ್ಞಾನ ಮನುಷ್ಯನ ಉಪಯೋಗಕ್ಕೆ ಬೇಕೆ ಹೊರತು ವಿನಾಶಕ್ಕೆ ಅಲ್ಲ ಎಂದು ಸಾಹಿತಿ ಪೂರ್ಣಚಂದ್ರ ತೇಜಸ್ವಿ ಪ್ರತಿಪಾದಿಸಿದ್ದರು ಎಂದು ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಹೇಳಿದರು.
ಅಭಿರುಚಿ ಪ್ರಕಾಶನ, ಪುಸ್ತಕ ಪ್ರಕಾಶನ, ಪ್ರಗತಿಪರ ಸಂಘಟನೆಗಳ ಒಕ್ಕೂಟ, ಮಾನವ ಮಂಟಪ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ, ನಿರಂತರ ಫೌಂಡೇಷನ್ ಸಹಯೋಗದಲ್ಲಿ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ‘ಕರ್ವಾಲೊ-50’, ತೇಜಸ್ವಿ ಮತ್ತು ಪರಿಸರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಜ್ಞಾನ ಮನುಷ್ಯನ ಕೈಗೆ ಆಯುಧವಾಗಬಾರದು. ವಿಜ್ಞಾನ ಅಣುಬಾಂಬ್ ತಯಾರಿಸುವ ಯಂತ್ರವಾದರೆ ಅಪಾಯ. ಇಂದಿನ ಸಂಶೋಧನೆಗಳನ್ನು ನೋಡಿದರೆ 3ನೇ ಮಹಾಯುದ್ಧಕ್ಕೆ ವಿಜ್ಞಾನವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಕಾಣುತ್ತಿದ್ದೇವೆ. ಸೃಷ್ಟಿಯನ್ನು ವಿನಾಶ ಮಾಡಲು ಸಜ್ಜಾಗಿದ್ದಾರೆ ಎನ್ನುವ ಆತಂಕ ಮೂಡಿಸುತ್ತಿದೆ ಎಂದರು.
ಅತ್ಯಂತ ದುಷ್ಟ ಮತ್ತು ಮನೆಯಾಳ ಪದ ಎಂದರೆ ಅಭಿವೃದ್ಧಿ. ಅಭಿವೃದ್ಧಿ ಎಂದರೆ ಶೇ.40 ಪಾರ್ಸೆಂಟ್ ನೆನಪಾಗುತ್ತದೆ. ನಲ್ವತ್ತು ಪಾರ್ಸೆಂಟ್ ಭ್ರಷ್ಟಾಚಾರವಾದರೂ ಭಿಕ್ಷುಕರಾಗಿ ಬದುಕಬಹುದು. ಆದರೆ ಶೇ.80ರಷ್ಟು ಪ್ರಕೃತಿಯನ್ನು ಅಭಿವೃದ್ಧಿ ಹೆಸರಿನಲ್ಲಿ ಬಲಿಕೊಟ್ಟು ಬದುಕಲು ಸಾಧ್ಯವಿಲ್ಲ ಎಂದರು.
‘ಜೀವ ವಿಕಾಸಕ್ಕೆ ಕೊನೆಯೆಂದು? ಅದು ನಿರಂತರ’ ಎಂದು ಕರ್ವಾಲೊ ಕಾದಂಬರಿಯಲ್ಲಿ ಬರುವ ಸಾಲು ಪ್ರತಿ ಕ್ಷಣ ಕುತೂಹಲದಿಂದ ಬದುಕುಬೇಕು ಎನ್ನುವುದನ್ನು ಹೇಳುತ್ತವೆ. ತೇಜಸ್ವಿ ಅವರು ಅಂದು ಹೇಳಿದ ಮಾತುಗಳು ಇಂದು ವಿಶ್ವವಿದ್ಯಾಲಯದಲ್ಲಿ ಚರ್ಚೆ ಆಗುತ್ತಿದೆ. ವಿಜ್ಞಾನ ಉಪಯೋಗವಾಗಬೇಕೆ ಹೊರತು, ದುರುಪಯೋಗ ಆಗಬಾರದು ಎಂದು ಹೇಳಿದರು.
ಕರ್ವಾಲೊ ಸುತ್ತಮುತ್ತ: ಸಂವಾದದಲ್ಲಿ ಮಾತನಾಡಿದ ತೇಜಸ್ವಿ ಅವರ ಒಡನಾಡಿಯಾದ ಪ್ರಕಾಶಕ ಬಿ.ಎಂ.ಶ್ರೀರಾಮ್, ಪೂರ್ಣಚಂದ್ರ ತೇಜಸ್ವಿ ಅವರು ರಾಷ್ಟ್ರಕವಿ ಕುವೆಂಪು ಪುತ್ರ ಎನ್ನುವುದಕ್ಕಿಂತ ತೇಜಸ್ವಿಯಾಗಿ ಗುರುತಿಸಿಕೊಳ್ಳುವ ಸವಾಲು ಇತ್ತು ಎಂದರು.
ಕರ್ವಾಲೊ ಕಾದಂಬರಿ ಪ್ರಕಟಗೊಂಡಾಗ ಸಾಹಿತ್ಯ ವಲಯ ಯಾವ ರೀತಿ ಸ್ವೀಕರಿಸುತ್ತಾರೋ ಎನ್ನುವ ಮಾತಿತ್ತು. ಕನ್ನಡ ಸಾಹಿತ್ಯ ವಲಯ ಯಾವಾಗಲೂ ಮುಂದೆ. ಆಗ ಕೆಲವರು ತೇಜಸ್ವಿ ಅವರನ್ನು ವಿಜ್ಞಾನ ಲೇಖಕ ಎಂದು ಗೇಲಿ ಮಾಡಿದರು. ಸ್ನೇಹಿತರು ಸಿಕ್ಕಾಪಟ್ಟೆ ಹೊಗಳಿದರು. ಒಳ್ಳೆ ವಿಮರ್ಶೆ ಬರೆದದ್ದು ಲಂಕೇಶ್ ಎಂದು ಸ್ಮರಿಸಿದರು.
ಕನ್ನಡ ವಿದ್ಯಾರ್ಥಿಯಾದ ತೇಜಸ್ವಿ ಅವರಿಗೆ ವಿಜ್ಞಾನ ಮೇಲೆ ಆಸಕ್ತಿ ಬೆಳೆಯಲು ಮೈಸೂರು ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಬರುತ್ತಿದ್ದ ಸಾಹಿತ್ಯ ಮತ್ತು ವಿಜ್ಞಾನ ಪತ್ರಿಕೆಗಳು, ನ್ಯಾಷನಲ್ ಜಿಯಾಗ್ರಫಿ ಪರಿಣಾಮ ಬೀರಿದೆ ಎಂದರು.
ಬಿರಿಯಾನಿ ಮರಿಯಪ್ಪ ಸೇರಿದಂತೆ ತಮ್ಮ ಸುತ್ತಮುತ್ತಲು ಇದ್ದ ಪಾತ್ರಗಳನ್ನೇ ತಮ್ಮ ದೃಷ್ಟಿಕೋನದಲ್ಲಿ ಸೃಷ್ಟಿಸುತ್ತಿದ್ದರು ಎಂದು ಕೆಲ ಪ್ರಸಂಗಗಳನ್ನು ಮೆಲುಕು ಹಾಕುವ ಮೂಲಕ ಸಭಿಕರನ್ನು ನಗಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೇಖಕ ಜಿ.ಪಿ.ಬಸವರಾಜು, 1980ರಲ್ಲಿ ಪುಸ್ತಕವಾಗಿ ಪ್ರಕಟಗೊಂಡ ಕಾರ್ವಾಲೊ ಕಾದಂಬರಿ ಇದುವರೆವಿಗೆ 95 ಮುದ್ರಣಗಳನ್ನು ಕಂಡಿದೆ. ಎಲ್ಲ ತಲೆಮಾರಿನವರನ್ನು ತಲುಪಿ, ನವ್ಯಸಾಹಿತ್ಯ ಕಾಲಘಟ್ಟದಲ್ಲಿ ಸಾಹಿತ್ಯ ಕೃಷಿ ಆರಂಭಿಸಿದ ತೇಜಸ್ವಿ ಅವರು ಅಂದಿನ ಸಾಹಿತ್ಯದ ಇಕ್ಕಟ್ಟಿನ ದಾರಿಯನ್ನು ಬಿಡಿಸಿಕೊಂಡವರು ಎಂದು ಹೇಳಿದರು.
ಕಾರ್ವಾಲೋ ಕಾದಂಬರಿಯಲ್ಲಿ ಸಂವಿಧಾನದ ಮೌಲ್ಯ ಇದೆ. ಜ್ಞಾನ ಅಕಾಡೆಮಿಕ್‌ಗೆ ಸೀಮಿತವಾಗಿಲ್ಲ ಎಂಬುದನ್ನು ಪಾತ್ರಗಳ ಮೂಲಕ ಅದ್ಭುತವಾಗಿ ಸೃಷ್ಟಿಸಲಾಗಿದೆ. ವೈಜ್ಞಾನಿಕ ಮತ್ತು ವೈಚಾರಿಕವಾದ ಈ ಕೃತಿಯು 50 ವರ್ಷ ತುಂಬಿದಾಗ ಕನ್ನಡಿಗರು, ಸರ್ಕಾರ ಸಂಭ್ರಮಾರಣೆ ಮಾಡದಿರುವುದು ದುದೈರ್ವದ ಸಂಗತಿ ಎಂದು ಹೇಳಿದರು.
ನಾ ಕಂಡಂತೆ ತೇಜಸ್ವಿ ಕುರಿತು ಕುಪ್ಪಳ್ಳಿ ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಕೃಷಿ, ಹೋರಾಟ, ಛಾಯಾಗ್ರಹಣ ಮತ್ತು ಪರಿಸರ ಕುರಿತು ಎಂ.ವಿ.ಕೃಷ್ಣ, ತೇಜಸ್ವಿ ಅವರ ಒಡನಾಟದಲ್ಲಿ ಕುರಿತು ಪುಸ್ತಕ ಪ್ರಕಾಶನದ ರಾಘವೇಂದ್ರ ಮಾತನಾಡಿದರು. ಆಯೋಜಕರಾದ ಅಭಿರುಚಿ ಗಣೇಶ್, ಪ್ರೊ.ಕಾಳಚನ್ನೇಗೌಡ ಇತರರು ಇದ್ದರು. ಕನ್ನಡದ ತೇಜಸ್ಸು ಪುಸ್ತಕ ಬಿಡುಗಡೆಗೊಳಿಸಲಾಯಿತು.