

ಹುಬ್ಬಳ್ಳಿ: ವಿಜ್ಞಾನ ಬರೀ ಪ್ರಯೋಗಾಲಯಕ್ಕೆ ಸೀಮಿತವಲ್ಲ. ಅಭಿನಯ ಕಲೆಯ ಮೂಲಕ ಜನಸಾಮಾನ್ಯರಿಗೆ ವಿಜ್ಞಾನದ ಜ್ಞಾನವನ್ನು ಸುಲಭವಾಗಿ ತಲುಪಿಸಬಹುದು ಎಂದು ಜೀವಿ ಕಲಾಬಳಗದ ಮುಖ್ಯಸ್ಥ ಗದಿಗಯ್ಯ ಹಿರೇಮಠ ಅಭಿಪ್ರಾಯಪಟ್ಟರು.
ಹುಬ್ಬಳ್ಳಿ ತಾಲೂಕಿನ ಕಿರೇಸೂರನಲ್ಲಿ ಸುನಿಧಿ ಕಲಾ ಸೌರಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಿದ್ದ ಶಿಕ್ಷಕ ಸಾಹಿತಿ ಡಾ.ಲಿಂಗರಾಜ ರಾಮಾಪೂರ ಅವರ ಜಾಗೃತಿಗಾಗಿ ಆರು ನಾಟಕಗಳು ಕೃತಿ ಬಿಡುಗಡೆ ಮಾಡಿ, ಅವರು ಮಾತನಾಡಿದರು.
ಶಾಲೆ ಸಮುದಾಯದ ಒಂದು ಅಂಗ. ಶಾಲೆಯಲ್ಲಿ ಕಲಿತ ಜ್ಞಾನ, ಕೌಶಲ, ತಿಳಿವಳಿಕೆ ನಿತ್ಯ ಜೀವನದಲ್ಲಿ ಪ್ರಯೋಜನಕ್ಕೆ ಬರಬೇಕು. ಅದು ಪ್ರದರ್ಶನ ಕಲೆಗಳಿಂದ ಸಾಧ್ಯ. ನಾಟಕದಿಂದ ಸಮಾಜದ ಓರೆ ಕೋರೆಗಳನ್ನು ತಿದ್ದುವ ಕಾರ್ಯ ಸಾಧ್ಯ. ಕವಿ, ಸಾಹಿತಿ, ಲೇಖಕ ಸಾಯಬಹುದು. ಆದರೆ, ಅವರ ವಿಚಾರಗಳು ಸಮಾಜದ ಮೇಲೆ ಪ್ರಖರವಾದ ಬೆಳಕನ್ನು ಬೀರಲು ಸಾಧ್ಯ ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಬಿ.ಕೆ. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ‘ಯಾರು ಸುಖೀ’ ನಾಟಕ ಮಕ್ಕಳಿಂದ ಪ್ರದರ್ಶನಗೊಂಡಿತು. ರಂಗಾಯಣ ನಿಕಟಪೂರ್ವ ಅಧ್ಯಕ್ಷ ಸುಭಾಸ ನರೇಂದ್ರ, ಗದಿಗಯ್ಯಾ ಹಿರೇಮಠ, ನಿರ್ದೇಶಕಿ ವೀಣಾ ಅಠವಲೆ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಹೇಮರಡ್ಡಿ ಚೌರಡ್ಡಿ, ಸುಮನ ತೇಲಂಗ, ಈಶ್ವರಗೌಡ ಪಾಟೀಲ, ಸಾವಿತ್ರಿ ಸವದತ್ತಿ, ಎಸ್.ಎಸ್.ಅಂಗಡಿ, ಮಂಜುನಾಥ ಬಾಜಿರಾಹುತ, ವೈ. ಎಸ್. ರೇವಡಿಹಾಳ, ಮಂಜುನಾಥ ಹುಬ್ಬಳ್ಳಿ, ಮುತ್ತು ಸವದತ್ತಿ, ಇತರರು ಇದ್ದರು.
ಪೂರ್ಣಿಮಾ ಮತ್ತು ರೋಹಿಣಿ ಪ್ರಾರ್ಥನಾ ಗೀತೆ ಹಾಡಿದರು. ಡಾ.ಲಿಂಗರಾಜ ರಾಮಾಪೂರ ನಿರ್ವಹಿಸಿದರು. ಶಿಕ್ಷಕ ಅಶೋಕ ಈರಗಾರ ಸ್ವಾಗತಿಸಿದರು. ಎಸ್. ವೈ. ಪೂಜಾರ ವಂದಿಸಿದರು.