ಗಮನ ಸೆಳೆದ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳು

12
Published on

ಮೈಸೂರು: ಅಂತಾರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ನಗರದ ಹೂಟಗಳ್ಳಿಯಲ್ಲಿರುವ ದಕ್ಷ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ವಸ್ತುಪ್ರದರ್ಶನ ಗಮನ ಸೆಳೆಯಿತು.
ಡಾ.ಸಿ.ವಿ.ರಾಮನ್ ಹೆಸರಿನಲ್ಲಿರುವ ವಿಜ್ಞಾನ ದಿನದ ಮಹತ್ವ ಸಾರುವ ಪಿಪಿಟಿ ಪ್ರದರ್ಶನ ಮತ್ತು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ವಿಜ್ಞಾನ ಮಾದರಿಗಳ ವಸ್ತುಪ್ರದರ್ಶನವನ್ನು ವೀಕ್ಷಿಸಿ ಅದರ ಮಾಹಿತಿ ಪಡೆಯುವ ಮೂಲಕ ಕಾಲೇಜಿನ ಕಾರ್ಯದರ್ಶಿ ಸೋನಿಯಾ ಉಮಾಪತಿ ರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಜ್ಞಾನ ಬದುಕಿನಲ್ಲಿ ಎಲ್ಲರಿಗೂ ಅಗತ್ಯವಾದುದು. ಪದವಿ ಹಂತದ ವಿದ್ಯಾರ್ಥಿಗಳು ಈ ರೀತಿಯ ವಸ್ತುಪ್ರದರ್ಶನದಿಂದ ವಿಮುಖರಾಗುತ್ತಾರೆ. ಆದರೆ ವಿಜ್ಞಾನದ ಮಾದರಿಗಳನ್ನು ತಯಾರಿಸುವಲ್ಲಿ ವಾಣಿಜ್ಯ ಕ್ಷೇತ್ರದ ವಿದ್ಯಾರ್ಥಿಗಳಾದ ನಿಮ್ಮ ಶ್ರಮ ಮತ್ತು ಭಾಗವಹಿಸಿಕೆ ಹೆಮ್ಮೆ ತರುತ್ತದೆ ಎಂದು ಸಂತಸವ್ಯಕ್ತಪಡಿಸಿದರು.
ದಕ್ಷ ಕಾಲೇಜಿನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಎಂ.ಬಿ.ಮಹೇಶ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋಗುತ್ತಿದೆ. 10 ವರ್ಷದ ಹಿಂದೆ ಇದ್ದ 2ಜಿ ತಂತ್ರಜ್ಞಾನ ಇಂದು 5ಜಿ ಮಟ್ಟಕ್ಕೆ ಬೆಳೆದಿದೆ. ಇದರಿಂದ ನಮಗೆ ಜಗತ್ತು ಸಾಕಷ್ಟು ಹತ್ತಿರವಾಗಿದೆ. ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಕೆಳಹಂತದ ನೌಕರಿಯಲ್ಲಿದ್ದವರು ಐಎಎಸ್‌ನಂತಹ ಉನ್ನತ ಮಟ್ಟದ ಪರೀಕ್ಷೆಯನ್ನು ಪಾಸು ಮಾಡಿರುವುದನ್ನು ನಾವು ಕಾಣಬಹುದು ಎಂದರು.
ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಚ್.ಸಿ.ಆನಂದ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮ ಜರುಗಿತು. ಸಹಾಯಕ ಪ್ರಾಧ್ಯಾಪಕರಾದ ಅರ್ಪಿತಾ, ಅರ್ಷಿಯಾ ಖಾನಂ, ಪಲ್ಲವಿ ಕುಮಾರ್, ಅಶ್ವಿನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net