ಸರ್ಕಾರಿ ಪ್ರೌಢಶಾಲೆಗಳಲ್ಲಿ ಸೈನ್ಸ್ ಲ್ಯಾಬ್

Screenshot_2025-09-26-12-07-45-18.jpg
Published on

ಧಾರವಾಡ: ಪ್ರಸ್ತುತದಲ್ಲಿ ಸಂಶೋಧನೆ, ಆವಿಷ್ಕಾರಗಳಿಗೆ ಹೆಚ್ಚಿನ ಮನ್ನಣೆ ಇದೆ. ಹೀಗಾಗಿ ಮಕ್ಕಳಲ್ಲಿ ಪ್ರಯೋಗಶೀಲತೆ, ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಹೆಚ್ಚು ಮಕ್ಕಳ ದಾಖಲಾತಿ ಇರುವ ಧಾರವಾಡ ಜಿಲ್ಲೆಯ ಆಯ್ದ ಏಳು ಶಾಲೆಗಳಲ್ಲಿ 'ವಿಜ್ಞಾನ ಪ್ರಯೋಗಾಲಯ' ಆರಂಭಿಸಲಾಗಿದೆ.

ರಾಜ್ಯದ 250 ಪ್ರೌಢಶಾಲೆಗಳಲ್ಲಿ 'ವಿಜ್ಞಾನ ಪ್ರಯೋಗಾಲಯ' ಆರಂಭಿಸಲಾಗುತ್ತಿದೆ. ಇದರ ಭಾಗವಾಗಿಯೇ ಜಿಲ್ಲೆಯಲ್ಲಿ ಈ ಪ್ರಯೋಗಾಲಯವನ್ನು ಪ್ರಾರಂಭಿಸಲಾಗಿದೆ. ಪ್ರೌಢಶಾಲೆ ಹಂತದ 8, 9 ಹಾಗೂ 10ನೇ ತರಗತಿಯ ವಿಜ್ಞಾನ ಪಠ್ಯಗಳನ್ನು ಪ್ರಯೋಗಗಳ ಮೂಲಕ ಕಲಿಯುವುದರಿಂದ ವಿಜ್ಞಾನ ವಿಷಯ ಮನದಟ್ಟಾಗಲಿದೆ. ಸುಲಭವಾಗಿ ಅರ್ಥೈಸಿಕೊಳ್ಳಲು ಅನುಕೂಲವಾಗುತ್ತದೆ. ಜತೆಗೆ ವಿಜ್ಞಾನದ ಬಗೆಗಿನ ಆಸಕ್ತಿ ಹೆಚ್ಚುತ್ತದೆ. ಹೆಚ್ಚು ದಾಖಲಾತಿ ಇರುವ ಶಾಲೆಗಳಿಗೆ ಪ್ರಯೋಗಾಲಯ ನೀಡುತ್ತಿರುವುದರಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದನ್ನು ಸದುಪಯೋಗ ಪಡಿಸಿಕೊಳ್ಳಲಿದ್ದಾರೆ.

2.32 ಲಕ್ಷ ರೂ. ವೆಚ್ಚ: ಪ್ರತಿ ವಿಜ್ಞಾನ

ಪ್ರಯೋಗಾಲಯ ಸ್ಥಾಪನೆಗೆ 2.32 ಲಕ್ಷ ರೂ. ವೆಚ್ಚ ಮಾಡಲಾಗುತ್ತಿದೆ. ಲ್ಯಾಬ್ ಉಪಕರಣಗಳಿಗೆ 1.50 ಲಕ್ಷ ರೂ., ಪೀಠೋಪಕರಣಗಳಿಗೆ 20 ಸಾವಿರ ರೂ., ಗ್ಲಾಸ್ ಡೋರ್ ಬಾಕ್ಸ್ 15 ಸಾವಿರ ರೂ., ಲೇಖನ ಸಾಮಗ್ರಿ ಸೇರಿ ನಾನಾ ಅಗತ್ಯ ವಸ್ತುಗಳು ಇರಲಿದೆ. ಶಾಲೆ ಮುಖ್ಯ ಶಿಕ್ಷಕರು ಪ್ರಯೋಗಾಲಯದ ಅಗತ್ಯ ಉಪಕರಣಗಳನ್ನು ಖರೀದಿಸಿ ಲೆಕ್ಕಪತ್ರ ನಿರ್ವಹಣೆ ಮಾಡಬೇಕಿದೆ.

ಶಿಕ್ಷಕರಿಗೆ ನಿರ್ದೇಶನ: ಜಿಲ್ಲೆಯ ಬಹುತೇಕ ಸರ್ಕಾರಿ ಪ್ರೌಢಶಾಲೆಗಳಲ್ಲಿ ಈಗಾಗಲೇ ಕಂಪ್ಯೂಟರ್ ಲ್ಯಾಬ್ ಸೌಲಭ್ಯವಿದೆ. ಆದರೆ, ಅನೇಕ ಕಡೆಗಳಲ್ಲಿ ಇದರ ಬಳಕೆ ಮಾಡಿ ಮಕ್ಕಳಲ್ಲಿ ಕಂಪ್ಯೂಟರ್ ಜ್ಞಾನ ನೀಡುವ ಪ್ರಯತ್ನ ಮಾಡಲಾಗುತ್ತಿಲ್ಲ. ಇದರಿಂದ ಲ್ಯಾಬ್ ಇದ್ದು ಇಲ್ಲದಂತಾಗಿದೆ. ಇದೇ ರೀತಿಯಲ್ಲಿ ವಿಜ್ಞಾನ ಪ್ರಯೋಗಾಲಯಗಳು ಆಗಬಾರದು. ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಸರಳವಾಗಿ ಅರ್ಥೈಸುವ ಕೆಲಸ ಮಾಡಬೇಕಿದೆ. ಇದರಿಂದ ಫಲಿತಾಂಶವನ್ನೂ ಹೆಚ್ಚಿಸಬೇಕಿದೆ ಎಂದು ಅಧಿಕಾರಿಗಳು ಶಿಕ್ಷಕರಿಗೆ ನಿರ್ದೇಶನ ನೀಡಿದ್ದಾರೆ.

ಯಾವೆಲ್ಲ ವಿದ್ಯಾಲಯ?:

ಧಾರವಾಡ ತಾಲೂಕು ನವಲೂರು ಸರ್ಕಾರಿ ಪ್ರೌಢಶಾಲೆ, ಕಲಘಟಗಿ ತಾಲೂಕಿನ ಹುಲಕೊಪ್ಪ ಸರ್ಕಾರಿ ಪ್ರೌಢಶಾಲೆ, ಬೆಲವಂತರ ಪ್ರೌಢಶಾಲೆ, ನವಲಗುಂದ ತಾಲೂಕು ಶಿರೂರು ಸರ್ಕಾರಿ ಪ್ರೌಢಶಾಲೆ ಹಾಗೂ ಕೋಳಿವಾಡ ಸರ್ಕಾರಿ ಪ್ರೌಢಶಾಲೆ, ಹುಬ್ಬಳ್ಳಿ ಗ್ರಾಮೀಣ ತಾಲೂಕು ಅಂಚಟಗೇರಿ ಸರ್ಕಾರಿ ಪ್ರೌಢಶಾಲೆ, ಹುಬ್ಬಳ್ಳಿ ಶಹರ ತಾಲೂಕು ಪೆಂಡಾರಗಲ್ಲಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿಜ್ಞಾನ ಪ್ರಯೋಗಾಲಯ ಆರಂಭಿಸಲಾಗಿದೆ.

ಪ್ರೌಡಶಾಲೆಯ ವಿಜ್ಞಾನ ಪಠ್ಯಕ್ರಮಕ್ಕೆ ಅನುಗುಣವಾಗಿ ವಿಜ್ಞಾನ ಪ್ರಯೋಗಾಲಯದಲ್ಲಿ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ವಿಷಯಗಳನ್ನು ಪ್ರಾಯೋಗಿಕವಾಗಿ ಹೇಳಿಕೊಡಲಾಗುತ್ತದೆ. ಆಯ್ದ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯ ಪ್ರಾರಂಭಿಸಲಾಗಿದ್ದು, ಮಕ್ಕಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅಪರ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net