

ಚನ್ನರಾಯಪಟ್ಟಣ: ಆಧುನಿಕ ಜಗತ್ತಿನಲ್ಲಿ ಮನುಷ್ಯನ ಬದುಕಿಗೆ ವಿಜ್ಞಾನ ಅತ್ಯಗತ್ಯ ಎಂದು ಆದಿಚುಂಚನಗಿರಿ ಹಾಸನ ಶಾಖಾಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹಿರೀಸಾವೆಯಲ್ಲಿ ಶ್ರೀ ಲಕ್ಷ್ಮೀರಂಗನಾಥ ಪೆಟ್ರೋಲಿಯಂನ ಸಂಚಾರ ಡೀಸೆಲ್ ಬಂಕ್‌ಗೆ (ವಾಹನ) ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ವಿಜ್ಞಾನ ಬೆಳೆದಂತೆ ಮನುಷ್ಯನಲ್ಲಿ ದುರಾಸೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವೈಜ್ಞಾನಿಕ ಬದುಕಿನಲ್ಲಿ ಪ್ರಾರಂಭಿಸುವ ವ್ಯಾಪಾರದ ಎಲ್ಲ ಹಂತಗಳಲ್ಲಿಯೂ ಲಾಭ ಹಾಗೂ ನಷ್ಟ ಇದ್ದೇ ಇರುತ್ತದೆ. ಆದರೆ ಬಂದ ಲಾಭವನ್ನು ಸಮಾಜ ಸೇವೆ ಹಾಗೂ ಪರಿಸರ ಅಭಿವೃದ್ಧಿಗೆ ಬಳಕೆ ಮಾಡಬೇಕು ಎಂದು ಸಲಹೆ ನೀಡಿದರು.
ಭಾರತ್ ಪೆಟ್ರೋಲಿಯಂನ ಮೈಸೂರು ವಿಭಾಗದ ಪ್ರಾಂತೀಯ ವ್ಯವಸ್ಥಾಪಕ ವಿ.ವಿ.ಎಸ್ ಗುನ್ನಾಜಿ ರಾವ್ ಮಾತನಾಡಿ, 6 ಸಾವಿರ ಲೀಟರ್ ಸಾಮರ್ಥ್ಯ ಹೊಂದಿರುವ ವಾಹನವು ಕೇಂದ್ರದಿಂದ 100 ಕಿ.ಮೀ. ವ್ಯಾಪ್ತಿವರೆಗೂ ಸೇವೆ ಒದಗಿಸಲಿದೆ. 50 ಲೀಟರ್ ಮೇಲ್ಪಟ್ಟು ಅಗತ್ಯವಿರುವವರು ಆನ್‌ಲೈನ್ ಮೂಲಕ ಸೇವೆ ಪಡೆಯಬಹುದಾಗಿದೆ ಎಂದರು.
ಕಬ್ಬಳಿ ಶಾಖಾಮಠದ ಶ್ರೀ ಶಿವಪುತ್ರನಾಥಸ್ವಾಮೀಜಿ, ಭಾರತ್ ಪೆಟ್ರೋಲಿಯಂನ ಮೈಸೂರು ವಿಭಾಗದ ಸಂಪರ್ಕಾಧಿಕಾರಿ ಎಂ.ಸುಹಾಸ್ ದೇಶ್‌ಪಾಂಡೆ, ಹಿರಿಯ ಪ್ರಬಂಧಕ ವಿ.ಎಸ್.ಸುಬ್ರಹ್ಮಣ್ಯನ್, ವ್ಯವಸ್ಥಾಪಕ ಆರ್.ಅರುಣ್, ಬಂಕ್ ಮಾಲೀಕ ಕಾಂತರಾಜ್, ದಿಡಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಆರ್.ರತ್ನರಾಜ್ ಇತರರು ಹಾಜರಿದ್ದರು.