

ಮೈಸೂರು: ಭ್ರಮರ ಟ್ರಸ್ಟ್ ಆಫ್ ವೈ.ಟಿ. ಆ್ಯಂಡ್ ಮಾಧುರಿ ತಾತಾಚಾರಿ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ವಿಜ್ಞಾನದಲ್ಲಿ ಆಸಕ್ತಿ ಮೂಡಿಸುವ ಸಲುವಾಗಿ ವೈಜ್ಞಾನಿಕ ಪ್ರಯೋಗಗಳ ಪ್ರಾತ್ಯಕ್ಷಿಕೆಯನ್ನು ನಗರದ ಅಮೃತ ವಿಶ್ವವಿದ್ಯಾಪೀಠಂನಲ್ಲಿ ಆಯೋಜಿಸಲಾಗಿತ್ತು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಜ್ಞಾನವು ಪಠ್ಯಪುಸ್ತಕ ಅಥವಾ ಪ್ರಯೋಗಾಲಯಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಇದು ಸಮಾಜದ ಹಲವಾರು ಅಂಶಗಳ ಮೇಲೆ ಪ್ರಭಾವ ಬೀರುವ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಯಮಿತವಾಗಿ ವೈಜ್ಞಾನಿಕ ಪ್ರಯೋಗಗಳನ್ನು ನಡೆಸುವುದು ಸಮಾಜದ ಸುಧಾರಣೆಗೆ ಕೊಡುಗೆ ನೀಡುವ ಅಗತ್ಯ ಚಟುವಟಿಕೆಗಳಾಗಿರುತ್ತವೆ. ವಿಜ್ಞಾನಕ್ಕೆ ನಮ್ಮ ರಾಜ್ಯ ಹಾಗೂ ದೇಶ ಐತಿಹಾಸಿಕ ಕೊಡುಗೆಗಳನ್ನು ನೀಡಿದೆ ಎಂದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಾವಯವ ರಸಾಯನಶಾಸ್ತ್ರ ವಿಭಾಗದ ಗೌರವ ಪ್ರಾಧ್ಯಾಪಕರಾದ ಶಾಂತಿಸ್ವರೂಪ ಭಟ್ನಾಗರ್, ಪ್ರಶಸ್ತಿ ಪುರಸ್ಕೃತ ಪ್ರೊ.ಉದಯ್ ಮೈತ್ರ ನೇತೃತ್ವದಲ್ಲಿ ರಸಾಯನಶಾಸ್ತ್ರ ಪ್ರಯೋಗಗಳ ನೇರ ಪ್ರದರ್ಶನ ಕಾರ್ಯಕ್ರಮ ಜರುಗಿತು. ವೈಜ್ಞಾನಿಕ ಪರಿಕಲ್ಪನೆಗಳ ಪ್ರಾಯೋಗಿಕ ಅನ್ವಯಗಳನ್ನು ಪ್ರದರ್ಶಿಸುವ ಆಕರ್ಷಕ ಪ್ರಯೋಗಗಳೊಂದಿಗೆ ಪ್ರೊ.ಮೈತ್ರ ಪ್ರೇಕ್ಷಕರನ್ನು ಆಕರ್ಷಿಸಿದರು.
ಬೆಂಗಳೂರಿನ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಸಮಿತಾ ಮೈತ್ರ ಅವರು ಶೈಕ್ಷಣಿಕ ಮತ್ತು ಸ್ಪೂರ್ತಿದಾಯಕ ಪ್ರಾತ್ಯಕ್ಷಿಕೆ ನಡೆಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತಷ್ಟು ಬೆಳಗಿಸಿದರು.
ನೀರಿನ ಸಾಂದ್ರತೆಯನ್ನು ಪರಿಶೀಲಿಸುವುದು ಮತ್ತು ಜನಪ್ರಿಯವಾದ ಎಲಿಫ್ಯಾಂಟ್ ಟೂತ್‌ಪೇಸ್ಟ್ ಪ್ರತಿಕ್ರಿಯೆ ಸೇರಿದಂತೆ ಅಗತ್ಯ ರಸಾಯನಶಾಸ್ತ್ರದ ಪರಿಕಲ್ಪನೆಗಳ ಮೇಲೆ ವಿವಿಧ ಪ್ರಯೋಗಗಳ ಪ್ರದರ್ಶನಗಳನ್ನು ನಡೆಸಲಾಯಿತು. ಕೆಮಿಲುಮಿನಿಸೆಂಟ್ ವಸ್ತುಗಳನ್ನು ಬಳಸಿ ಬೆಳಕು ಚೆಲ್ಲುವ ಅದ್ಭುತ ಪ್ರಾತ್ಯಕ್ಷಿಕೆ ಯುವ ಪ್ರೇಕ್ಷಕರ ಗಮನ ಸೆಳೆಯಿತು.
ಈ ಪ್ರಯೋಗಗಳನ್ನು ಪ್ರದರ್ಶಿಸುವ ಮುಖ್ಯ ಉದ್ದೇಶ ವೈಜ್ಞಾನಿಕ ತತ್ವಗಳ ಪ್ರಾಯೋಗಿಕ ಅನ್ವಯಗಳನ್ನು ತೋರಿಸುವುದು, ಕುತೂಹಲ ಹುಟ್ಟುಹಾಕುವುದು ಮತ್ತು ದೈನಂದಿನ ಜೀವನದಲ್ಲಿ ರಸಾಯನಶಾಸ್ತ್ರದ ಅದ್ಭುತಗಳನ್ನು ಅನ್ವೇಷಿಸಲು ಮತ್ತು ಪ್ರಶಂಸಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವುದಾಗಿದೆ. ವಿವಿಧ ಶಾಲಾ ಕಾಲೇಜುಗಳ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಟ್ರಸ್ಟ್‌ನ ಸಂಸ್ಥಾಪಕಿ ಮಾಧುರಿ ತಾತಾಚಾರಿ, ಮಾತಾ ಅಮೃತಾನಂದಮಯಿ ಮಠದ ಬ್ರಹ್ಮಚಾರಿ ಪ್ರಸಾದಾಮೃತ ಚೈತನ್ಯ, ಪ್ರಾಂಶುಪಾಲ ಪ್ರೊ.ಜಿ.ರವೀಂದ್ರನಾಥ್, ಅಸೋಸಿಯೇಟ್ ಡೀನ್ ಪ್ರೊ. ಶೇಖರ್‌ಬಾಬು, ಬ್ರಹ್ಮಚಾರಿ ಅನಂತಾನಂದ ಚೈತನ್ಯ, ಬ್ರಹ್ಮಚಾರಿ ಮುಕ್ತಿದಾಮೃತ ಚೈತನ್ಯ ಇತರರು ಇದ್ದರು.