

ಮೈಸೂರು: ವಿಜ್ಞಾನ ಇಂದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದ್ದು, ವಿಜ್ಞಾನ ಕಡೆಗಣಿಸಿ ಬದುಕಲು ಸಾಧ್ಯವೇ ಇಲ್ಲ. ಹಾಗಾಗಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೆಚ್ಚು ಸಂಶೋಧನೆ ನಡೆಯಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ವೆಂಕಟರಾಮಯ್ಯ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಜಯನಗರದಲ್ಲಿರುವ ಶ್ರೀವಿವೇಕ ಬಾಲೋದ್ಯಾನ ಪಬ್ಲಿಕ್ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿಜ್ಞಾನ ಬದುಕಿನ ಅವಿಭಾಜ್ಯ ಅಂಗವಾಗಿದೆ. ವಿಜ್ಞಾನವನ್ನು ಕಡೆಗಣಿಸಿ ಮನುಷ್ಯ ಬದುಕಲು ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಇಂದು ಸಂಶೋಧನೆಗಳು ನಡೆಯುತ್ತಿವೆ. ಅಂತಹ ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಬೇಕಾದರೆ ನೀವು ವಿಜ್ಞಾನಕ್ಕೆ ಸಂಬಂಧಪಟ್ಟಂತಹ ವಿಚಾರಗಳನ್ನು ಈ ವಯಸ್ಸಿನಿಂದಲೇ ಅಧ್ಯಯನದ ಮೂಲಕ ತಿಳಿದುಕೊಳ್ಳಬೇಕು ಎಂದರು.
ವಿಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಿ ಅವರನ್ನು ಆದರ್ಶವಾಗಿಟ್ಟುಕೊಂಡು ಮುನ್ನಡೆಯಬೇಕು. ಈ ನಿಟ್ಟಿನಲ್ಲಿ ಶ್ರೀವಿವೇಕ ಬಾಲೋದ್ಯಾನ ಶಾಲೆಯು ತಮ್ಮೆಲ್ಲರಿಗೂ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಒಳ್ಳೆಯ ಜ್ಞಾನವನ್ನು ಒದಗಿಸಕೊಡುತ್ತಾ ಬಂದಿರುವುದು ನನಗೆ ಸಂತೋಷವೆನಿಸುತ್ತದೆ ಎಂದರು.
‘ಗ್ರ್ಯಾವಿಟಿ ಸೈನ್ಸ್ ಫೌಂಡೇಷನ್’ ಸಂಸ್ಥಾಪಕ ಅಭಿಷೇಕ್ ಮಾತನಾಡಿ, ನೀವೆಲ್ಲರೂ ಇಂದು ಮಾಡಿರುವ ವಿಜ್ಞಾನಕ್ಕೆ ಸಂಬಂಧಪಟ್ಟ ಮಾದರಿಗಳು ನಿಮ್ಮ ಜ್ಞಾನವನ್ನು, ವಿಜ್ಞಾನದ ಬಗ್ಗೆ ನಿಮ್ಮಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ. ನಿಮ್ಮ ಕಲಿಕೆ ಹೀಗೆ ಮುಂದುವರೆಯಲಿ ಎಂದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎಂ.ಎಸ್.ನಾಗೇಶ್ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮದ ತಯಾರಿಯನ್ನು ನಾನು ಗಮನಿಸಿದಾಗ, ವಿಜ್ಞಾನದ ಬಗ್ಗೆ ನಿಮ್ಮಲ್ಲಿರುವ ಆಸಕ್ತಿಯನ್ನು ಕಂಡು ನನಗೆ ತುಂಬಾ ಖುಷಿಯಾಗಿರುತ್ತದೆ. ವಿಜ್ಞಾನದ ಬಗ್ಗೆ ಇನ್ನೂ ಹೆಚ್ಚಿನ ತಿಳುವಳಿಕೆಯನ್ನು ಪಡೆದುಕೊಳ್ಳಲು ನಿಮಗೆ ಸಹಾಯಕವಾಗುವ ಇನ್ನೂ ಹೆಚ್ಚಿನ ರೀತಿಯ ಅನುಕೂಲತೆಗಳನ್ನು ಮಾಡಲು ಈ ಸಂಸ್ಥೆ ಸಿದ್ಧತೆ ನಡೆಸಿದೆ ಎಂದು ಭರವಸೆ ನೀಡಿದರು.
ವಸ್ತು ಪ್ರದರ್ಶನದ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಸಂಚಾರ ವಿಜ್ಞಾನ ಪ್ರಯೋಗಾಲಯದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿಜ್ಞಾನ ಶಿಕ್ಷಕರಾದ ವಿಶ್ವಾಸ್ ಪ್ರೇಮ್ ಕುಮಾರ್, ಪುಷ್ಪಾ, ಸ್ಪೂರ್ತಿ, ಶೃತಿ ಅನಂತ್, ಮಲ್ಲಿಕಾರಾವ್, ಸೃಜನಾ ತೀರ್ಪುಗಾರರಾಗಿ ಆಗಮಿಸಿದ್ದರು.