ಮೈಸೂರಿನ ಮೆಲ್ಲಹಳ್ಳಿ ಶಾಲೆಯಲ್ಲಿ ವಿಜ್ಞಾನ ಮೇಳ ಯಶಸ್ವಿ

31
Published on

ಮೈಸೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಂತ್ರ ಫೌಂಡೇಷನ್ ಹಾಗೂ ಅಗಸ್ತ್ಯ ಫೌಂಡೇಷನ್‌ನಿಂದ ಮೈಸೂರು ತಾಲೂಕಿನ ಮೆಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ವಿಜ್ಞಾನ ಮೇಳ’ ಯಶಸ್ವಿಯಾಗಿ ನಡೆಯಿತು.

ಮಂತ್ರ ಫೌಂಡೇಷನ್‌ನ ಸಂಪನ್ಮೂಲ ಶಿಕ್ಷಕ ಜಿ.ಹನುಮಂತರಾಜು ಮಾತನಾಡಿ, ವಿಜ್ಞಾನ ವಿಷಯವನ್ನು ಚಟುವಟಿಕೆ ಆಧಾರಿತವಾಗಿ ಕಲಿಸಬೇಕು. ವಿಜ್ಞಾನ ತರಗತಿಗಳು ಪ್ರಯೋಗಾಲಯದಲ್ಲಿ ನಡೆದರೆ ವಿದ್ಯಾರ್ಥಿಗಳು, ವಿಜ್ಞಾನದ ಸಾಮಗ್ರಿಗಳನ್ನು ನೋಡಿ, ಮುಟ್ಟಿ ಸಂತಸಪಡುತ್ತಾರೆ. ಅವುಗಳ ಪರಿಚಯದ ಜತೆಗೆ ಕಲಿಕೆಯಲ್ಲಿ ನಾವೀನ್ಯತೆ ಉಂಟಾಗುತ್ತದೆ ಎಂದರು.

ಮುಖ್ಯ ಶಿಕ್ಷಕಿ ಪಿ.ಎನ್. ವೀಣಾ ಮಾತನಾಡಿ, ವಿಜ್ಞಾನ ಮೇಳಗಳಿಂದ ಮಕ್ಕಳ ಆಲೋಚನಾ ಶಕ್ತಿ ಬೆಳೆಯುತ್ತದೆ. ಅವರಲ್ಲಿರುವ ಪ್ರತಿಭೆಯನ್ನು ಹೊರಹಾಕಲು ಅವಕಾಶ ಮಾಡುತ್ತದೆ. ಹೆಚ್ಚಿನ ಕಲಿಕೆಗೂ ಪ್ರೋತ್ಸಾಹಿಸುತ್ತದೆ. ಈ ಮೇಳಕ್ಕೆ ಸಹಕಾರ ನೀಡುತ್ತಿರುವ ಅಗಸ್ತ್ಯ ಮತ್ತು ಮಂತ್ರ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮಂಚಪ್ಪ ‘ವಿಜ್ಞಾನ ಮೇಳ’ಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ತಾಲೂಕು ಶಿಕ್ಷಕರ ಸಂಘದ ಮಾಜಿ ನಿರ್ದೇಶಕ ಟಿ.ಸತೀಶ್ ಜವರೇಗೌಡ, ಮೆಲ್ಲಹಳ್ಳಿ ವಲಯ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ದೀಪು, ವಿಜ್ಞಾನ ಮೇಳದ ಸಂಚಾಲಕಿ ಎನ್.ಆರ್. ಸುಜಾತಾ, ಅಗಸ್ತ್ಯ ಫೌಂಡೇಷನ್‌ನ ಬೋಧಕ ಬಿ.ರಾಘವೇಂದ್ರ, ಸಹಾಯಕ ಬಿ.ಜಿ. ಹರೀಶ್ ಇತರರು ಇದ್ದರು.

ಮೇಳದಲ್ಲಿ ವಿದ್ಯಾರ್ಥಿಗಳು ಭೌತ, ಜೀವ ಮತ್ತು ರಸಾಯನ ಶಾಸ್ತ್ರದ ವಿವಿಧ ಆಕರ್ಷಕ ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕಿಟ್ಟು ವಿವರಣೆ ನೀಡಿದರು. ಕನ್ನಡ, ಇಂಗ್ಲಿಷ್ ಹಾಗೂ ಗಣಿತ ವಿಷಯದ ವಿವಿಧ ಆಕೃತಿಗಳು, ಮಾದರಿಗಳು, ಚಿತ್ರಪಟಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಅಕ್ಕಪಕ್ಕದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಸಹ ವೀಕ್ಷಣೆ ಮಾಡಿ ಮಾಹಿತಿ ಪಡೆದರು.

ವಿಜ್ಞಾನ ಮೇಳದಲ್ಲಿ ಉತ್ತಮ ಕೌಶಲ ಮತ್ತು ನಾವೀನ್ಯತೆ ಪ್ರದರ್ಶಿಸಿದ ವಿದ್ಯಾರ್ಥಿ ಎಲ್. ಶ್ರೇಯಸ್ ಮತ್ತು ಜಿ. ಚಿನ್ಮಯ್ (ಪ್ರಥಮ), ಎಸ್. ವಿಸ್ಮಯ ಮತ್ತು ಎಂ.ರಕ್ಷಿತಾ (ದ್ವಿತೀಯ), ಹೇಮಾವತಿ ಮತ್ತು ಆರ್.ಮನ್ವಿತ (ತೃತೀಯ) ಬಹುಮಾನ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net