

ವಿಜಯವಾಣಿ ಸುದ್ದಿಜಾಲ ವಿಜಯಪುರ
ಯಾವ ಮಕ್ಕಳು ದಡ್ಡರಾಗಿ ಇರುವುದಿಲ್ಲ. ಅವರದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಆ ಪ್ರತಿಭೆ ಹೊರ ತೆಗೆಯಲು ಅವರಿಗೆ ಪೂರಕವಾದ ವೇದಿಕೆ, ವಿಜ್ಞಾ ವಸ್ತು ಪ್ರದರ್ಶನದಂತಹ ಕಾರ್ಯಕ್ರಮಗಳು ಅವಶ್ಯ ಎಂದು ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ಎಸ್.ರಾಜೇಶ್ ಹೇಳಿದರು.
ಪಟ್ಟಣದ ನಂದಿನಿ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮೇಳ ಮತ್ತು ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಪಾಲಕರು ಮಕ್ಕಳಿಗೆ ಪ್ರೋತ್ಸಾಹ ನೀಡಿದಷ್ಟು ಪ್ರತಿ ಮಕ್ಕಳ ಪ್ರತಿಭೆ ಹೊರ ಬರುತ್ತದೆ. ಅವರು ಹೆಚ್ಚು ಹೆಚ್ಚು ಕಲಿಯಲು ಅನುಕೂಲವಾಗುತ್ತದೆ ಎಂದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಕಂಠ ಮಾತನಾಡಿ, ವಿಜ್ಞಾನ ವಸ್ತು ಪ್ರದರ್ಶನಗಳ ಆಯೋಜನೆಯಿಂದ ಮಕ್ಕಳಲ್ಲಿ ಕ್ರಿಯಾತ್ಮಕವಾದ ಚಿಂತನೆಗಳು ಬೆಳೆಯುತ್ತವೆ. ಓದಿ ಕಲಿಯುವುದಕ್ಕಿಂತ ಮಾಡಿ ಕಲಿಯುವ ಆಸಕ್ತಿ ಹೆಚ್ಚುತ್ತದೆ. ಆಗ ವಿಚಾರಗಳು ಮಕ್ಕಳ ಜ್ಞಾಪಕದಲ್ಲಿ ನೆಲೆಯೂರುತ್ತವೆ ಎಂದು ಹೇಳಿದರು.
ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಬಿ.ಚೇತನ್ ಗೌಡ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಮುಂದುವರಿಯುತ್ತಿದ್ದು, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕವಾದ ಮನೋಭಾವನೆಗಳು ಮೂಡಿಸಬೇಕು ಎಂದರು.
ವಿದ್ಯಾರ್ಥಿಗಳು ವಿದ್ಯುತ್ ಉತ್ಪಾದನೆ, ಸ್ಮಾರ್ಟ್ ಸಿಟಿಗಳಿಗೆ ವಿದ್ಯುತ್ ಪೂರೈಕೆ, ಅರಣ್ಯ ಸಂರಕ್ಷಣೆ, ಮಳೆ ನೀರುಕೊಯ್ಲು, ರಾಕೆಟ್ ಉಡಾವಣೆ, ಸೌರವಿದ್ಯುತ್ ಉತ್ಪಾದನೆ, ಮಾನವನ ದೇಹರಚನೆ, ಜೀರ್ಣಾಂಗ ವ್ಯೆಹ, ಸೌರಮಂಡಲ ರಚನೆ, ಚಂದ್ರಯಾನ-3 ವಿಕ್ರಮ್ ಲ್ಯಾಂಡರ್, ರೋವರ್, ಗಾಳಿಯಿಂದ ವಿದ್ಯುತ್ ಉತ್ಪಾದನೆ, ರೇಷ್ಮೆಉದ್ಯಮ, ವಿವಿಧ ಬಗೆಯ ಬೆಳೆಗಳ ಬೆಳವಣಿಗೆ, ಅವುಗಳ ಉಪಯೋಗ, ಕಾರಂಜಿ, ಸೂರ್ಯಗ್ರಹಣ, ಚಂದ್ರ ಗ್ರಹಣ, ಪರಿಸರದಲ್ಲಿ ಸಿಗುವಂತಹ ಔಷಧಿ ಸಸ್ಯಗಳು, ಭೂಕಂಪನ ಹೇಗೆ ಸಂಭವಿಸುತ್ತವೆ, ಲಾವಾರಸ ಹೇಗೆ ಉತ್ಪತ್ತಿಯಾಗುತ್ತದೆ, ಗ್ರಹಣಗಳು ಹೇಗೆ ಆಗುತ್ತವೆ, ನೀರಿನ ಪ್ರಾಮುಖ್ಯತೆ, ಏತನೀರಾವರಿ ಪದ್ಧತಿ ಹಲವಾರು ಬಗೆಯ ಮಾದರಿಗಳನ್ನು ತಯಾರಿಸಿ, ವಿದ್ಯಾರ್ಥಿಗಳು ವಿವರಿಸಿದರು.
ಪ್ರಾಂಶುಪಾಲರಾದ ವಂದನಾ ಮಿಶ್ರಾ, ಸಹಶಿಕ್ಷಕರಾದ ಬಿ.ವಿಮಲಾ, ಬಿ.ವಿ.ಕುಮಾರ್, ಮಂಜುನಾಥ್‌ರಾವ್, ಎಂ.ಅಶೋಕ್ ಶೆಟ್ಟಿ, ಎನ್.ತಿಪ್ಪರಾಜು, ಮಂಜುನಾಥ್, ಆರ್.ಶಂಕರ್, ಇತರರು ಇದ್ದರು