

ಮಂಗಳೂರು : ಶಿಕ್ಷಣ ಇಲಾಖೆ ವತಿಯಿಂದ ಶಕ್ತಿನಗರದ ಶಕ್ತಿ ವಿದ್ಯಾ ಸಂಸ್ಥೆಯ ಸಹಯೋಗದಲ್ಲಿ 2024-25 ನೇ ಸಾಲಿನ ಪ್ರೌಢ ಶಾಲಾ ವಿಭಾಗದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಶಕ್ತಿ ವಿದ್ಯಾ ಸಂಸ್ಥೆಯ ರೇಷ್ಮಾ ಮೆಮೋರಿಯಲ್ ಆಡಿಟೋರಿಯಂನಲ್ಲಿ ನಡೆಯಿತು.
ಪ್ರದರ್ಶನ ಉದ್ಘಾಟಿಸಿದ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ಕೆ.ವಿ.ರಾವ್ ಮಾತನಾಡಿ ‘ ಜಗತ್ತು ಇಂದು ಎಲ್ಲ ರಂಗದಲ್ಲಿಯು ಆನ್‌ಲೈನ್ ಯುಗದಲ್ಲಿದೆ. ವಿಶ್ವದಲ್ಲಿ ನಾವು ಮೊದಲಿಗರಾಗಬೇಕಾದರೆ ವಿಜ್ಞಾನದಲ್ಲಿ ಪ್ರತಿದಿನವೂ ಅನ್ವೇಷಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ರಾಜ್ಯ ಮಟ್ಟದಲ್ಲಿ ಆಯೋಜಿಸುತ್ತಿದೆ. ಶಾಲೆಯ ಒಳಗಡೆ ಪಠ್ಯ ಕ್ರಮದ ಮೂಲಕ ಅಂಕ ಪಡೆಯುವುದರ ಜತೆಗೆ ಇಂತಹ ವಿಜ್ಞಾನದ ಪ್ರಯೋಗವನ್ನು ಸಹ ಕಲಿಯಬೇಕು ಎಂದರು
ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ್.ಎಸ್. ಪಟೇಗಾರ್, ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂ ಶಿಕ್ಷಣ ಸಹಾಯಕ ಹೇಮರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಕ್ತಿ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಡಾ. ಕೆ.ಸಿ.ನಾಕ್ ವಹಿಸಿದ್ದರು.
ಮಂಗಳೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್.ಎಚ್.ಆರ್., ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನ್ಯಾಸಕ ಶ್ರೀನಿವಾಸ್ ಅಡಿಗ , ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್.ಕೆ., ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಶಕ್ತಿನಗರ ಉಪಸ್ಥಿತರಿದ್ದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮಿ.ಕೆ. ಸ್ವಾಗತಿಸಿ, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ಬಬಿತಾ ಸೂರಜ್ ವಂದಿಸಿದರು. ಶಿಕ್ಷಕಿ ಪ್ರೇಮಲತಾ ಕಾರ್ಯಕ್ರಮ ನಿರೂಪಿಸಿದರು. ರಾಜ್ಯದ ಪ್ರತೀ ಜಿಲ್ಲೆಯಿಂದ ತಲಾ 6 ಸ್ಪರ್ಧಿಗಳ ಹಾಗೆ ಒಟ್ಟು 210 ಸ್ಪರ್ಧಿಗಳು ಭಾಗವಹಿಸಿದ್ದರು.