

ಮೈಸೂರು: ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್(ಎನ್‌ಐಇ) ಸಂಸ್ಥೆ ವತಿಯಿಂದ ಶನಿವಾರ ಮುಕ್ತ ವಿವಿಯ ಘಟಿಕೋತ್ಸವ ಸಭಾಂಗಣದಲ್ಲಿ ‘ಇಲ್ಯುಮಿನೇಟ್ 2.0’ ಕಾರ್ಯಕ್ರಮ ನಡೆಯಿತು.
ರಾಷ್ಟ್ರದ ವಿಜ್ಞಾನ ಮತ್ತು ಇಂಜಿನಿಯರಿಂಗ್ ಕ್ಷೇತ್ರದ ಬೆಳವಣಿಗೆಗಳ ಕುರಿತ ಉಪನ್ಯಾಸ ಆಯೋಜಿಸಲಾಗಿತ್ತು. ಜತೆಗೆ ಭಾರತದ ವಿಭಿನ್ನ ಆವಿಷ್ಕಾರಗಳು ಮತ್ತು ತಾಂತ್ರಿಕ ಅದ್ಭುತಗಳ ಭವ್ಯ ಪರಿಚಯ ಮಾಡಲಾಯಿತು. ವಿಜ್ಞಾನಿಗಳು, ಇಂಜಿನಿಯರ್‌ಗಳು, ಉದ್ಯಮಿಗಳು, ಸರ್ಕಾರಿ ಉದ್ಯೋಗಿಗಳು, ಶಿಕ್ಷಣ ತಜ್ಞರು, ವಿದ್ಯಾರ್ಥಿಗಳು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಒಳಗೊಂಡ ವೈವಿಧ್ಯಮಯ ಮತ್ತು ವಿಶಿಷ್ಟ ಪ್ರೇಕ್ಷಕರನ್ನು ಸೆಳೆಯುವಂತೆ ಕಾರ್ಯಕ್ರಮ ಜರುಗಿತು.
ಆಧುನಿಕ ಇಂಜಿನಿಯರಿಂಗ್ ಪ್ರಗತಿ ಮತ್ತು ಉದ್ಯಮ, ಶೈಕ್ಷಣಿಕ ಕ್ಷೇತ್ರದ ಒಳನೋಟಗಳ ಬಗ್ಗೆ ಚರ್ಚಿಸಲಾಯಿತು. ಜಾಗತಿಕ ಇಂಜಿನಿಯರಿಂಗ್ ಕ್ಷೇತ್ರವನ್ನು ಇನ್ನು ಉತ್ತಮವಾಗಿ ಬೆಳೆಸುವ ಸಂಬಂಧ ತಜ್ಞರು ತಾಂತ್ರಿಕ ಜ್ಞಾನ ಮತ್ತು ಪರಿಣತಿ ಬಗ್ಗೆ ಮಾಹಿತಿ ಹಂಚಿಕೊಂಡರು.
ಏಥರ್ ಎನರ್ಜಿಯ ಹಿರಿಯ ಉಪಾಧ್ಯಕ್ಷ ಕೆ.ಎಸ್.ರಮೇಶ್, ಏಥರ್ ಎನರ್ಜಿಯ ಎಲೆಕ್ಟ್ರಿಕ್ ವೆಹಿಕಲ್ ಡಿಸೈನ್ ವಿವರ ಹಾಗೂ ಅದರ ಗುಣಗಳ ಕುರಿತು ಮಾತನಾಡಿದರು.
ಲಾರ್ಸೆನ್ ಆ್ಯಂಡ್ ಟೂಬ್ರೊನ ಸಲಹಾ ತಜ್ಞ ಮುಖೇಶ್ ರಾವಲ್, ಗುಜರಾತ್‌ನಲ್ಲಿರುವ ಜನಪ್ರಿಯ ಏಕತಾ ಪ್ರತಿಮೆ(ಸ್ಟ್ಯಾಚ್ಯು ಆಫ್ ಯೂನಿಟಿ) ಬಗ್ಗೆ ತಿಳಿಸಿದರು. ಪ್ರತಿಮೆಯ ವಿನ್ಯಾಸ ಮತ್ತು ನಿರ್ಮಾಣದ ಹಿಂದಿನ ಕುತೂಹಲಕಾರಿ ವಿಚಾರ ಬಹಿರಂಗಪಡಿಸಿದರು.
ಎನ್‌ಇ ಸಂಸ್ಥೆಯ ಖಜಾಂಚಿ ಡಾ.ದತ್ತಕುಮಾರ್ ಮಾತನಾಡಿ, ಭವಿಷ್ಯವನ್ನು ರೂಪಿಸುವಲ್ಲಿ ಇಂಜಿನಿಯರಿಂಗ್ ನಾವೀನ್ಯತೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಲ್ಯುಮಿನೇಟ್, ತಾಂತ್ರಿಕ ಪ್ರಗತಿ ಮತ್ತು ವಿಶಿಷ್ಟ ಅನುಕರಣೀಯ ಪ್ರಯತ್ನಗಳ ಮೇಲೆ ಬೆಳಕು ಚೆಲ್ಲುತ್ತದೆ. ಯಶಸ್ವಿ ಉದ್ಘಾಟನಾ ಆವೃತ್ತಿಯ ನಂತರ, ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವಿಸಸ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಎರಡೂ ಸಂಸ್ಥೆ ಸೇರಿಕೊಂಡು ಈ ಇಂಜಿನಿಯರಿಂಗ್ ಶ್ರೇಷ್ಠತಾ ಕಾರ್ಯಕ್ರಮ ರೂಪಿಸಿವೆ ಎಂದರು.
ಜಾಗತಿಕ ಇಂಜಿನಿಯರಿಂಗ್ ಕ್ಷೇತ್ರವನ್ನು ಮರುವ್ಯಾಖ್ಯಾನಿಸುತ್ತಿರುವ ಪ್ರಮುಖ ತಜ್ಞರಿಂದ ಸಲಹೆ, ಸಹಕಾರ ಪಡೆಯಲು ವಿದ್ಯಾರ್ಥಿಗಳಿಗೆ ಇಲ್ಯುಮಿನೇಟ್ ಕಾರ್ಯಕ್ರಮ ಪ್ರಭಾವಶಾಲಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ಉದ್ಯಮ-ಅಕಾಡೆಮಿ ಕ್ಷೇತ್ರದ ಸಂಯೋಜನೆಯು ಉದಯೋನ್ಮುಖ ಇಂಜಿನಿಯರ್‌ಗಳಿಗೆ ಅಮೂಲ್ಯವಾಗಿದೆ ಎಂದರು.
ಎಲ್ ಆ್ಯಂಡ್ ಟಿ ಟೆಕ್ನಾಲಜಿ ಸರ್ವಿಸಸ್‌ನ ಮುಖ್ಯಸ್ಥ ರಾಜೀವ್ ಗುಪ್ತಾ, ಪ್ರಾಂಶುಪಾಲರಾದ ಡಾ. ರೋಹಿಣಿ ನಾಗಪದ್ಮಾ ಇತರರು ಇದ್ದರು.