

ವಿಜಯವಾಣಿ ಸುದ್ದಿಜಾಲ ತುಮಕೂರು
ಕುಣಿಗಲ್ ರಸ್ತೆಯ ಬಿದರಕಟ್ಟೆ ಬಳಿ ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ತುಮಕೂರು ವಿಶ್ವವಿದ್ಯಾಲಯ ನಿರ್ಮಿಸಿರುವ ನೂತನ ಕ್ಯಾಂಪಸ್ "ಜ್ಞಾನಸಿರಿ'ಗೆ ತರಗತಿಗಳು ಶಿಫ್ಟ್ ಆಗುವ ಕಾಲ ಕೂಡಿಬಂದಿದ್ದು, ಲಭ್ಯವಿರುವ ಮೂಲಸೌಕರ್ಯಕ್ಕೆ ಅನುಗುಣವಾಗಿ ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿಜ್ಞಾನ ವಿಭಾಗಗಳು ಸ್ಥಳಾಂತರಗೊಂಡಿವೆ.
ಕಟ್ಟಡ ನಿರ್ಮಾಣವಾಗಿದ್ದರೂ ತುಮಕೂರಿನಿಂದ 8 ಕಿಮೀ ದೂರದಲ್ಲಿರುವ "ಜ್ಞಾನಸಿರಿ' ಕ್ಯಾಂಪಸ್ಗೆ ಓಡಾಡಲು ಸಾರಿಗೆ ವ್ಯವಸ್ಥೆ ಇಲ್ಲದೆ ತರಗತಿ ಆರಂಭಿಸಲು ವಿಶ್ವವಿದ್ಯಾಲಯಕ್ಕೆ ಸಾಧ್ಯವಾಗಿರಲಿಲ್ಲ. ನಗರದಿಂದ ದೂರದಲ್ಲಿರುವ ಜ್ಞಾನಸಿರಿಗೆ ವಿದ್ಯಾರ್ಥಿಗಳು, ಅಧ್ಯಾಪಕರು ಹೋಗಿ&ಬರಲು ಅನುಕೂಲವಾಗುವಂತೆ ನಗರಸಾರಿಗೆ ವ್ಯವಸ್ಥೆ ಅಗತ್ಯವಿದ್ದು, ಇದಕ್ಕಾಗಿ ಕೆಎಸ್ಆರ್ಟಿಸಿಗೆ ಪತ್ರ ಬರೆದು ವಿವಿ ಮನವಿ ಮಾಡಿತ್ತು.
2017ರಲ್ಲಿ ಜ್ಞಾನಸಿರಿ ನಿರ್ಮಾಣ ಕಾಮಗಾರಿ ಆರಂಭವಾಗಿ, 2013ರಲ್ಲಿಯೇ ಬಹುತೇಕ ಪೂರ್ಣಗೊಂಡಿದೆ. ವಿದ್ಯಾರ್ಥಿನಿಲಯಗಳನ್ನು ಬಿಜೆಪಿ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಅಶ್ವತ್ಥನಾರಾಯಣ ಉದ್ಘಾಟಿಸಿದ್ದರು. 2024ರ ಜನವರಿ 29ರಂದು ಸಿಎಂ ಸಿದ್ದರಾಮಯ್ಯ ನಗರದ ವಿವಿ ಕ್ಯಾಂಪಸ್ ಸಭಾಂಗಣದಲ್ಲಿಯೇ ನೂತನ ಕ್ಯಾಂಪಸ್ಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಗೊಳಿಸಿದ್ದರೂ ರಾಜ್ಯಪಾಲರು ದಿನಾಂಕ ನೀಡದ ಹಿನ್ನೆಲೆಯಲ್ಲಿ ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಗಿತ್ತು. 2024ರ ಮೇ 10ರಂದು ಬಸವಜಯಂತಿ, ಅಕ್ಷಯ ತೃತೀಯ ಶುಭದಿನದಂದು ಪೂಜೆ ಸಲ್ಲಿಸಿದ್ದರೂ ಸಾರಿಗೆ ಸೌಲಭ್ಯವಿಲ್ಲದ ಕಾರಣಕ್ಕೆ ತರಗತಿ ಆರಂಭಿಸಲು ವಿವಿ ಆಡಳಿತಕ್ಕೆ ಸಾಧ್ಯವಾಗಿರಲಿಲ್ಲ. ಈಗ ಸ್ವಂತ ಕ್ಯಾಂಪಸ್ ಹೊಂದುವ 20 ವರ್ಷಗಳ ವಿವಿ ಕನಸು ನನಸಾಗಲಿದೆ. ತುಮಕೂರು ತಾಲೂಕು ಬಿದಿರುಕಟ್ಟೆ ಗ್ರಾಮದ 240 ಎಕರೆ ಜಾಗದಲ್ಲಿ ನಿರ್ಮಿಸಿರುವ ಹೊಸ ಕ್ಯಾಂಪಸ್ "ಜ್ಞಾನಸಿರಿ'ಯಲ್ಲಿ ವಿಜ್ಞಾನ ವಿಭಾಗದ ಎಲ್ಲ ತರಗತಿಗಳ ಶಿಫ್ಟ್ಗೆ
ಪೀಠೋಪಕರಣ ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲಾಗಿದೆ. ಶೈಕ್ಷಣಿಕ ಭವನ, ವಿಶ್ವವಿದ್ಯಾಲಯದ
ಮುಖ್ಯದ್ವಾರ, ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿನಿಲಯ, ಸ್ನಾತಕೋತ್ತರ ವಿದ್ಯಾರ್ಥಿ ನಿಲಯ, ಸಂಶೋಧನಾ ವಿದ್ಯಾರ್ಥಿನಿಲಯಕ್ಕೆ ಹಾಗೂ ಪಶ್ಚಿಮ ಹಾಗೂ ಉತ್ತರ ದ್ವಾರ ನಿರ್ಮಾಣವಾಗಿದ್ದು, ಈ ಶೈಕ್ಷಣಿಕ ವರ್ಷದಿಂದಲೇ ಹೊಸ ಕ್ಯಾಂಪಸ್ಗೆ ತರಗತಿಗಳು ಶಿಫ್ಟ್ ಆಗಲಿವೆ.
40 ಕೋಟಿ ರೂ. ವೆಚ್ಚದ ಶೈಕ್ಷಣಿಕ ಭವನ: ಜ್ಞಾನಸಿರಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಅಗತ್ಯವಿರುವ ಶೈಕ್ಷಣಿಕ ಭವನಕ್ಕೆ ಸಿಎಂ ಚಾಲನೆ ನೀಡಲಿದ್ದು, ವಿಜ್ಞಾನ ವಿಷಯದ ಕನಿಷ್ಠ 10 ವಿಭಾಗಗಳು ಇದೇ ಸೋಮವಾರದಿಂದ (ಅ.21) ಕಾರ್ಯಾರಂಭ ಮಾಡಲಿವೆ. ಹೊಸ ಕ್ಯಾಂಪಸ್ನಲ್ಲಿ ವಿಜ್ಞಾನ ಕೇಂದ್ರ, ಸ್ಫರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಹಾಗೂ ಕಲಾ ಭವನ ಕೂಡ ಬಳಕೆಗೆ ಸಿದ್ಧವಾಗಿದ್ದು, ವಿದ್ಯಾರ್ಥಿಗಳಿಗೆ ಸುಸಜ್ಜಿತ ಕೊಠಡಿಗಳು ಲಭ್ಯವಾಗಿವೆ.
ಅತಿಥಿ ಉಪನ್ಯಾಸಕರ ನೇಮಕಕ್ಕೆ ಮೀನಮೇಷ?
ತುಮಕೂರು ವಿವಿ ಪದವಿ ಹಾಗೂ ಸ್ನಾತಕೋತ್ತರ ವಿಭಾಗಕ್ಕೆ ಅಗತ್ಯವಿರುವ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನಿಸಿ ಸಂದರ್ಶನ ಕೂಡ ಪೂರ್ಣಗೊಳಿಸಿರುವ ವಿವಿ ಆಡಳಿತಕ್ಕೆ ಅರ್ಹರಿಗೆ ಆದೇಶಪತ್ರ ನೀಡಲು 15 ದಿನವಾದರೂ ಸಾಧ್ಯವಾಗಿಲ್ಲ. ನೇಮಕಾತಿ ಪತ್ರ ನೀಡುವ ಮುಂಚೆಯೇ ಪದವಿ ತರಗತಿಗಳಿಗೆ ಅಗತ್ಯವಿರುವ ಅತಿಥಿ ಉಪನ್ಯಾಸರನ್ನು ಆಯಾ ವಿಭಾಗದ ಮುಖ್ಯಸ್ಥರೇ ಅನಿಧಿಕೃತವಾಗಿ ನೇಮಿಸಿಕೊಂಡು ಪಾಠ ಮಾಡಿಸುತ್ತಿರುವುದು ಅಚ್ಚರಿ ಮೂಡಿಸಿದೆ. ಕುಲಸಚಿವೆ ನಹಿದಾ ಜಮ್ಜಮ್ ಅವರ ಸುಧೀರ್ ರಜೆಯ ನೆಪ ಮಾಡಿಕೊಂಡು ಆದೇಶಪತ್ರ ನೀಡಲು ವಿವಿ ತಡಮಾಡಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಗರಬಡಿದಂತಾಗಿದೆ.
ಗಂಟೆಗೊಂದು ಬಸ್: ತುಮಕೂರು ವಿವಿ ಮೊದಲ ವರ್ಷದ ಸ್ನಾತಕೋತ್ತರ ವಿಜ್ಞಾನ ವಿಷಯಗಳಿಗೆ ನೂತನ ಕ್ಯಾಂಪಸ್ ಆವರಣದಿಂದಲೇ ಅ.10ರಿಂದಲೇ ಪ್ರವೇಶಾತಿ ಆರಂಭವಾಗಲಿದ್ದು, ಅ.14ರಿಂದ ಪ್ರಥಮ ಸೆಮಿಸ್ಟರ್ ತರಗತಿ ಆರಂಭಿಸಲು ವಿವಿ ಮುಂದಾಗಿದೆ. ಪ್ರವೇಶಾತಿಗೆ ಸಂದರ್ಶನ ನಡೆಯುವ ಅ.10ರಂದು ಕೆಎಸ್ಆರ್ಟಿಸಿ ಅಧ್ಯಕ್ಷ ಶ್ರೀನಿವಾಸ್ ಸಾರಿಗೆ ಸೇವೆ ಚಾಲನೆ ನೀಡಲಿದ್ದು, ಅ.14ರಿಂದ ಪ್ರತಿನಿತ್ಯ ಕೆಎಸ್ಆರ್ಟಿಸಿ ಬಸ್ಗಳು ತುಮಕೂರು ನಗರ ಬಸ್ ನಿಲ್ದಾಣ ಹಾಗೂ ತುಮಕೂರು ವಿವಿ ನಗರ ಕ್ಯಾಂಪಸ್ನಿಂದ ಲಭ್ಯವಿರಲಿದೆ ಎಂದು ವಿವಿ ಆಡಳಿತ ಭರವಸೆ ನೀಡಿದೆ. ತುಮಕೂರು ನಗರ ಬಸ್ ನಿಲ್ದಾಣದಿಂದ ಬೆಳಗ್ಗೆ 8, 9, 10, 11ಕ್ಕೆ. ಮಧ್ಯಾಹ್ನ 2, 3, 4., 5, 6ರ ವರೆಗೆ ಹಾಗೂ ತುಮಕೂರು ವಿವಿ ನಗರ ಕ್ಯಾಂಪಸ್ನಿಂದ ಬೆಳಗ್ಗೆ 8.30, 9.30, 10.30, 11.30. ಮಧ್ಯಾಹ್ನ 2.30, 3.30, 4.30, 5.30, 6.30ರ ವರೆಗೂ 'ಜ್ಞಾನಸಿರಿ' ಕ್ಯಾಂಪಸ್ಗೆ ತೆರೆಳಲು ಬಸ್ ಲಭ್ಯವಿರಲಿದೆ.
ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಅಧಿಕಾರಿಗಳು, ಬೋಧಕ, ಬೋಧಕೇತರ ಸಿಬ್ಬಂದಿ ತುಮಕೂರು ನಗರ ಬಸ್ ನಿಲ್ದಾಣ ಮತ್ತು ನಗರ ಕ್ಯಾಂಪಸ್ನಿಂದ 'ಜ್ಞಾನಸಿರಿ' ಕ್ಯಾಂಪಸ್ಗೆ ತೆರಳಲು ಅನುವಾಗುವಂತೆ ಬಸ್ಗಳ ಸಂಚಾರ ಸೌಲಭ್ಯ ಕಲ್ಪಿಸಲಾಗುತ್ತಿದೆ. ದೈನಂದಿನ ಬಸ್ ಸೇವೆ ಒದಗಿಸಲು ಸಹಕರಿಸಿದ ಕೆಎಸ್ಆರ್ಟಿಸಿಗೆ ಧನ್ಯವಾದಗಳು.| ಪ್ರೊ.ಎಂ.ವೆಂಕಟೇಶ್ವರಲು ಕುಲಪತಿ