

ಮೈಸೂರು: ವಿಜ್ಞಾನ ಪ್ರತಿಯೊಬ್ಬರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದು, ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೋಬಯೋಲಜಿ ವಿಭಾಗದ ಅಧ್ಯಕ್ಷ ಡಾ.ಎಸ್. ಶಿಶುಪಾಲ ಕರೆ ನೀಡಿದರು.
ಯುವರಾಜ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮ ಜೀವನದ ಪ್ರತಿಯೊಂದು ಘಟ್ಟದಲ್ಲೂ ವಿಜ್ಞಾನ ಇದೆ. ಹಾಗಾಗಿ ವಿಜ್ಞಾನದ ಕುರಿತು ಯುವಜನರು ಹೆಚ್ಚಾಗಿ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಯಾರೋ ಹೇಳಿದ ವಿಷಯವನ್ನು ಪರಿಶೀಲನೆ ನಡೆಸದೆ ಏಕಾಏಕಿ ಒಪ್ಪಿಕೊಳ್ಳುವುದು ಸರಿಯಲ್ಲ. ವಿಜ್ಞಾನವು ಪ್ರತಿಯೊಂದು ವಿಷಯಕ್ಕೂ ತರ್ಕಬದ್ಧವಾದ ಉತ್ತರವನ್ನು ಬಯಸುತ್ತದೆ. ಹಾಗಾಗಿ ಯುವಜನರು ಪ್ರತಿಯೊಂದು ವಿಷಯಗಳ ಕುರಿತು ಕುತೂಹಲ ಬೆಳೆಸಿಕೊಂಡು ವೈಜ್ಞಾನಿಕ ಉತ್ತರ ಪಡೆಯಲು ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಯುವಜನರಲ್ಲಿ ಪ್ರತಿಯೊಂದು ವಿಷಯಗಳ ಕುರಿತು ಸಾಕಷ್ಟು ಕುತೂಹಲ ಇರುತ್ತದೆ. ಹಾಗಾಗಿ ಯುವಜನರಿಗೆ ವಿಜ್ಞಾನದ ಅವಶ್ಯಕತೆ ಇದೆ. ಪ್ರಾಣಿಗಳಿಗೆ ಕುತೂಹಲ ಇರುವುದಿಲ್ಲ. ಆದರೆ, ಮನುಷ್ಯನಿಗೆ ಕುತೂಹಲ ಇರುವ ಹಿನ್ನೆಲೆಯಲ್ಲಿ ಆತ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು. ಯುವಜನರು ತಮ್ಮಲ್ಲಿರುವ ಕುತೂಹಲಕ್ಕೆ ಪೂರಕವಾಗಿ ವಿಜ್ಞಾನವನ್ನು ಬಳಸಿಕೊಂಡು ಸಾಧನೆ ಮಾಡಬೇಕು. ವಿಜ್ಞಾನ ಪ್ರತಿಯೊಬ್ಬರಿಗೆ ಸತ್ಯದ ಮಾರ್ಗವನ್ನು ತೋರಿಸುತ್ತದೆ. ವಿಜ್ಞಾನಿ ಆಗುವವರು ಕುತೂಹಲದಿಂದ ಪ್ರತಿಯೊಂದು ವಿಷಯಗಳನ್ನು ಗಮನಿಸಬೇಕು. ವಿಜ್ಞಾನದಿಂದ ನಿರ್ಮಾಣ ಹಾಗೂ ನಿರ್ನಾನ ಎರಡೂ ಸಾಧ್ಯವಿದೆ. ಹಾಗಾಗಿ ವಿಜ್ಞಾನವನ್ನು ವಿವೇಚನೆಯಿಂದ ಬಳಸಬೇಕು ಎಂದರು.
ವೇದಿಕೆಯಲ್ಲಿ ಯುವರಾಜ ಕಾಲೇಜು ಪ್ರಾಂಶುಪಾಲ ಪ್ರೊ.ಎಸ್. ಮಹದೇವಮೂರ್ತಿ, ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ. ನಾಗೇಶ್‌ಬಾಬು, ಆಡಳಿತಾಧಿಕಾರಿ ಪ್ರೊ. ಅಜಯ್ ಕುಮಾರ್, ಐಕ್ಯೂಎಸಿ ಸಂಯೋಜಕ ಪ್ರೊ. ಬಿ.ಎಂ.ವೆಂಕಟೇಶ್, ಪ್ರಾಧ್ಯಾಪಕಿ ಪ್ರೊ. ದೇವಕಿ ಇದ್ದರು.