ಇಂದಿನಿಂದ ವಿಜ್ಞಾನ ಕಾಂಗ್ರೆಸ್: ಪ್ರಧಾನಿಯಿಂದ ಚಾಲನೆ, ಜಿಕೆವಿಕೆಯಲ್ಲಿ ಕಾರ್ಯಕ್ರಮ

Science 3 jan 20
Published on

ಬೆಂಗಳೂರು: ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ಆಯೋಜಿಸಲಾಗಿರುವ 5 ದಿನಗಳ 107ನೇ ಭಾರತೀಯ ವಿಜ್ಞಾನ ಕಾಂಗ್ರೆಸ್​ಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಜ.3) ಚಾಲನೆ ನೀಡಲಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ‘ವಿಜ್ಞಾನ ಮತ್ತು ತಂತ್ರಜ್ಞಾನ: ಗ್ರಾಮೀಣಾಭಿವೃದ್ದಿ’ ಧ್ಯೇಯವಾಕ್ಯದಡಿ 7ರವರೆಗೆ ಸಮ್ಮೇಳನ ಆಯೋಜನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10 ಗಂಟೆಗೆ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಡಾ. ಹರ್ಷವರ್ಧನ್, ಸಿಎಂ ಬಿ.ಎಸ್. ಯಡಿಯೂರಪ್ಪ, ರಾಜ್ಯಪಾಲ ವಿ.ಆರ್. ವಾಲಾ ಮತ್ತಿತತರು ಉಪಸ್ಥಿತರಿರುವರು.

ಜ.4ರಿಂದ 6ರವರೆಗೆ ಮಕ್ಕಳ ವಿಜ್ಞಾನ ಕಾಂಗ್ರೆಸ್, ಜ.5 ಮತ್ತು 6ರಂದು ಮಹಿಳಾ ವಿಜ್ಞಾನ ಕಾಂಗ್ರೆಸ್ ಮತ್ತು ವಿಜ್ಞಾನ ಸಂವಹನಕಾರರ ಕೂಟ ನಡೆಯಲಿದೆ. ಜತೆಗೆ ಜ. 6ರಂದು ರೈತರ ವಿಜ್ಞಾನ ಕಾಂಗ್ರೆಸ್ ನಡೆಯಲಿದೆ. ಸಮ್ಮೇಳನದಲ್ಲಿ 15 ಸಾವಿರಕ್ಕೂ ಹೆಚ್ಚಿನ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ನೊಬೆಲ್ ಪುರಸ್ಕೃತರು ಭಾಗಿ

ಸಮ್ಮೇಳನದಲ್ಲಿ 150ಕ್ಕೂ ಹೆಚ್ಚಿನ ದೇಶಗಳ ವಿವಿಧ ಸಂಸ್ಥೆಗಳು ಭಾಗಿಯಾಗಲಿವೆ. 24 ದೇಶಗಳ 74 ಜನ ಸಂಪನ್ಮೂಲ ವ್ಯಕ್ತಿಗಳು, 19 ಪ್ರಖ್ಯಾತ ವಿಜ್ಞಾನಿಗಳು ಭಾಗವಹಿಸುವರು. ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಜರ್ಮನಿಯ ಪ್ರೊ. ಸ್ಟೀಫನ್ ಹೆಲ್, ಇಸ್ರೇಲ್​ನ ಅದ ಇಯೊನಥ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಭಾರತ ರತ್ನ ಪುರಸ್ಕೃತ ಡಾ. ಸಿ.ಎನ್.ಆರ್. ರಾವ್ ಮಕ್ಕಳ ವಿಜ್ಞಾನ ಕಾಂಗ್ರೆಸ್ ಉದ್ಘಾಟಿಸಲಿದ್ದಾರೆ.

ಯೋಗ ವಿಜ್ಞಾನದ ಮಾಹಿತಿ

ಇದೇ ಮೊದಲ ಬಾರಿಗೆ ವಿಜ್ಞಾನ ಕಾಂಗ್ರೆಸ್​ನಲ್ಲಿ ಯೋಗ ವಿಜ್ಞಾನದ ಕುರಿತು ಮಾಹಿತಿ ನೀಡಲಾಗುತ್ತಿದೆ. ಯೋಗಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ವಿಚಾರಸಂಕಿರಣ ಏರ್ಪಡಿಸಲಾಗಿದೆ. ಅದರಲ್ಲಿ ಎಸ್-ವ್ಯಾಸ ವಿಶ್ವವಿದ್ಯಾಲಯದ ನಾಗೇಂದ್ರ ಯೋಗದ ಕುರಿತು ಮಾಹಿತಿ ನೀಡಲಿದ್ದಾರೆ.

ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ

ವಿಜ್ಞಾನ ಕಾಂಗ್ರೆಸ್​ನಲ್ಲಿ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಜಾರ್ಖಂಡ್ ಸೇರಿ 18ಕ್ಕೂ ಹೆಚ್ಚಿನ ರಾಜ್ಯಗಳ 5 ಸಾವಿರ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಅವರೆಲ್ಲರಿಗೂ ಕೃಷಿ ವಿಶ್ವವಿದ್ಯಾಲಯದಿಂದ ಉಚಿತ ವಸತಿ ವ್ಯವಸ್ಥೆ ಮಾಡಲಾಗುತ್ತಿದೆ. ಸಮಾವೇಶದಲ್ಲಿ ಪಾಲ್ಗೊಳ್ಳಲು ಬರುವವರಿಗೆ ಮಾಹಿತಿ ನೀಡಲು ವಿಮಾನನಿಲ್ದಾಣ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ಸಮಾವೇಶಕ್ಕೆ ತೆರಳುವ ಮಾರ್ಗ, ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜತೆಗೆ ಸಮಾವೇಶ ನಡೆಯುವ ಜಾಗದ ಕುರಿತ ಮಾಹಿತಿಯನ್ನು www.isc2020uasb.com ವೆಬ್​ಸೈಟ್ ಮತ್ತು ISC2020USB ಮೊಬೈಲ್ ಆಪ್​ನಲ್ಲಿ ಪಡೆಯಬಹುದಾಗಿದೆ.

ಕೃಷಿಗೆ ಸಂಬಂಧಿಸಿದ ಚರ್ಚೆಗಳಿಗೆ ಒತ್ತು

ಕೃಷಿ ವಿಶ್ವವಿದ್ಯಾಲಯದಲ್ಲಿ ಸಮಾವೇಶ ನಡೆಯುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಉಪಯುಕ್ತವಾಗುವಂತಹ ಚರ್ಚೆಗಳನ್ನು ನಡೆಸಲಾಗುತ್ತಿದೆ. ಪ್ರತ್ಯೇಕ ಮೂರು ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ಸಮಗ್ರ ಕೃಷಿ, ರೈತರ ಆದಾಯ ವೃದ್ಧಿ, ಹವಾಮಾನ ಬದಲಾವಣೆ, ಗ್ರಾಮೀಣ ಜೈವಿಕ ಉದ್ಯಮಶೀಲತೆ ಮತ್ತು ನೀತಿ ನಿಯಮಗಳು ಹೀಗೆ ವಿವಿಧ ವಿಷಯಗಳ ಬಗ್ಗೆ ರ್ಚಚಿಸಲಾಗುತ್ತದೆ. ವಿಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದ 200ಕ್ಕೂ ಹೆಚ್ಚಿನ ಸಂಸ್ಥೆಗಳು ಸಮಾವೇಶದಲ್ಲಿ ಪ್ರದರ್ಶನ ನೀಡಲಿವೆ. ಈ ವೇಳೆ ಬಿ2ಬಿ ಸಭೆಗಳು, ಒಪ್ಪಂದಗಳನ್ನು ಮಾಡಿಕೊಳ್ಳಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net