

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ ಫೆ. 24 ಮತ್ತು 25ರಂದು ವಿಜ್ಞಾನ ಸಂಭ್ರಮ ಕಾರ್ಯಕ್ರಮ- 2025 ಹೆಸರಾಂತ ವಿಜ್ಞಾನಿಗಳಿಂದ ಉಪನ್ಯಾಸ ಆಯೋಜಿಸಲಾಗಿದೆ ಎಂದು ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಭಾಭವನದಲ್ಲಿ ಪದವಿ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ, ಜೀವ ವಿಜ್ಞಾನದ ಕುರಿತು ಅರಿವು ಮೂಡಿಸಲಾಗುವುದು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸುವರು. ಕವಿವಿ ಕುಲಸಚಿವ ಡಾ. ಎ. ಚನ್ನಪ್ಪ, ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ಪ್ರಾಧ್ಯಾಪಕ ಡಾ. ಎಂ.ಆರ್.ಎನ್. ಮೂರ್ತಿ `ಬಯೋ ಫಿಸಿಕ್ಸ್' ಕುರಿತು, ಸನ್‌ರೇ ಸೋಲಾರ್ ಮ್ಯುಸಿಯಂನ ನಿರ್ದೇಶಕ ಮಹೇಶ ವಿ.ಎಸ್. ಸೋಲಾರ್ ಉಪಕರಣಗಳ ಪ್ರದರ್ಶನ ಅವುಗಳ ಕುರಿತು ಉಪನ್ಯಾಸ ನೀಡುವರು ಎಂದರು.
ಫೆ. 25ರಂದು ಸಂಜೆ 4 ಗಂಟೆಗೆ ಸಮಾರೋಪ ಜರುಗಲಿದೆ. ಧಾರವಾಡ ಐಐಟಿ ಡೀನ್ ಡಾ. ಎಸ್.ಎಂ. ಶಿವಪ್ರಸಾದ ನ್ಯಾನೋ ತಂತ್ರಜ್ಞಾನದ ಕುರಿತು ಉಪನ್ಯಾಸ ನೀಡುವರು. ಬೆಂಗಳೂರು ಯುಆರ್‌ಎಸ್‌ಸಿ ಇಸ್ರೋದ ನಿವೃತ್ತ ಉಪ ನಿರ್ದೇಶಕ ಡಾ. ಎಚ್.ಎನ್. ಸುರೇಶಕುಮಾರ, ಎಸ್‌ಡಿಎಂ ಇಂಜಿನಿಯರಿAಗ್ ಕಾಲೇಜಿನ ಪ್ರಾಚಾರ್ಯ ಡಾ. ಆರ್.ಎಲ್ ಚಕ್ರಸಾಲಿ ಮತ್ತು ಕಲಬುರಗಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ.ಜಿ. ಮೂಲಿಮನಿ ಉಪನ್ಯಾಸ ನೀಡುವರು ಎಂದರು.