ದೇಶದ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಅವಶ್ಯ: ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಸಲಹೆ

2
Published on

ಮೈಸೂರು: ದೇಶದ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಎಸ್.ಆರ್. ನಿರಂಜನ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಖಾತ್ರಿ ಘಟಕವು (ಐಕ್ಯೂಎಸಿ)ನಿಂದ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪ್ರೊ.ಎಚ್.ಶೇಖರ್ ಶೆಟ್ಟಿ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರಾೃ ನಂತರ ದೇಶದಲ್ಲಿದ್ದ ಬಡತನ ನಿರ್ಮೂಲನೆ ಮಾಡಲು ವಿಜ್ಞಾನ, ತಂತ್ರಜ್ಞಾನ ಅಗತ್ಯ ಎನ್ನುವುದನ್ನು ಮೊದಲ ಪ್ರಧಾನಿ ನೆಹರು ಮನಗಂಡಿದ್ದರು. ಹೀಗಾಗಿ ವಿಜ್ಞಾನ ಹಾಗೂ ತಂತ್ರಜ್ಞಾನದ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಇದಕ್ಕೆ ವಿಜ್ಞಾನಿಗಳು ಹಾಗೂ ತಂತ್ರಜ್ಞರ ಕಾಣಿಕೆ ಕಾರಣ. ಇದನ್ನು ವಿದ್ಯಾರ್ಥಿಗಳು ಸ್ಫೂರ್ತಿಯಾಗಿ ತೆಗೆದುಕೊಂಡು ಹೊಸ ಸಂಶೋಧನೆಯಲ್ಲಿ ತೊಡಗಬೇಕು ಎಂದು ಹೇಳಿದರು.
ಕೃತಕ ಬುದ್ಧಿ ಮತ್ತೆ ಸೇರಿದಂತೆ ಹೊಸ ತಂತ್ರಜ್ಞಾನಗಳು ಬರುತ್ತಿವೆ. ವಿಜ್ಞಾನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡವರು ಮೂರ್ಖರೊಂದಿಗೆ ವಾದ ಮಾಡಿ ಸಮಯ ವ್ಯರ್ಥ ಮಾಡಬಾರದು ಎಂದರು.
ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಮಾತನಾಡಿ, ಮೈಸೂರು ವಿಶ್ವವಿದ್ಯಾಲಯವು ಸಂಶೋಧನೆ ಹಾಗೂ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯದಲ್ಲಿ 15 ದತ್ತಿ ಉಪನ್ಯಾಸ ಸರಣಿ ನಡೆಯುತ್ತಿವೆ. 540 ಚಿನ್ನದ ಪದಕ ಹಾಗೂ 50 ನಗದು ಬಹುಮಾನಗಳನ್ನು ದಾನಿಗಳ ನೆರವಿನಿಂದ ನೀಡಲಾಗುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಕಲೆ, ವಾಣಿಜ್ಯ ಹಾಗೂ ಕಾನೂನು ವಿಷಯಗಳಲ್ಲಿ ಉಪನ್ಯಾಸಗಳು ನಡೆಯುತ್ತಿವೆ. ಇವು ವರ್ತಮಾನದ ಬೆಳವಣಿಗೆಯ ಬಗ್ಗೆ ಜ್ಞಾನವನ್ನು ವಿದ್ಯಾರ್ಥಿಗಳಿಗೆ ನೀಡುತ್ತವೆ. ನುರಿತ ತಜ್ಞರ ಸಲಹೆ ಪಡೆದು ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಪ್ಪಾರಾವ್ ಪೊಡಿಲೆ ಮಾತನಾಡಿ, ಹಸಿರಿನಿಂದ ಕಂಗೊಳಿಸುವ ಸಸ್ಯಗಳೂ ಕೀಟಭಾದೆಯನ್ನು ಎದುರಿಸುತ್ತಿರುತ್ತವೆ. ಆದರೆ ರೋಗ ನಿರೋಧಕ ಶಕ್ತಿಯನ್ನು ಅವು ಹೊಂದಿದ್ದು, ಪ್ರತಿಯೊಂದು ಸಸ್ಯ ಕೋಶವೂ ಸ್ವಯಂ ರಕ್ಷಿಸಿಕೊಳ್ಳುವ ಪ್ರತಿರಕ್ಷಣಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ ಎಂದರು.
ರೋಗಬಾಧೆಗಳಿಂದ ರಕ್ಷಿಸಿಕೊಳ್ಳುವ ಸಸ್ಯಗಳ ಬಗ್ಗೆ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ವಿಜ್ಞಾನ ವಿದ್ಯಾರ್ಥಿಗಳು ಕುತೂಹಲಿಗಳಾಗಬೇಕು. ಅಧ್ಯಯನ ಹಾಗೂ ಪ್ರಯೋಗಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಕುಲಸಚಿವೆ ವಿ.ಆರ್.ಶೈಲಜಾ, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಕೆ.ಎನ್.ಅಮೃತೇಶ್, ಪ್ರೊ.ಎಚ್. ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net