

ಮೈಸೂರು: ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರದಿಂದ ಪುನಾರಂಭಗೊಳ್ಳಲಿದ್ದು, ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛತಾ ಕೆಲಸ ಗರಿಗೆದರಿದ್ದರೆ, ಖಾಸಗಿ ಶಾಲೆಗಳಲ್ಲಿ ಕಲಿಕಾ ಚಟುವಟಿಕೆಗೆ ಚಾಲನೆ ದೊರೆಯಲಿದೆ.
2023-24ನೇ ಸಾಲಿನ ಶೈಕ್ಷಣಿಕ ಚಟುವಟಿಕೆ, ಪರೀಕ್ಷೆಗಳು ಮುಕ್ತಾಯಗೊಂಡ ಬಳಿಕ ಏಪ್ರಿಲ್ 11ರಿಂದ ಮೇ 28ರವರೆಗೆ ಶಾಲೆಗಳಿಗೆ ಬೇಸಿಗೆ ರಜೆ ನೀಡಲಾಗಿತ್ತು. 2023-24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಮೇ 29ಕ್ಕೆ ಶಾಲೆಗಳ ಬಾಗಿಲು ತೆರೆದು ಮಕ್ಕಳನ್ನು ಸ್ವಾಗತಿಸಲಾಗುತ್ತದೆ. ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರಿಂದ ಮಕ್ಕಳೂ ಪಾಠಶಾಲೆಗೆ ಮರಳಲು ಸಜ್ಜಾಗಿದ್ದಾರೆ.
ಖಾಸಗಿ ಶಾಲೆಗಳಲ್ಲಿ ಕಲಿಕಾ ಚಟುವಟಿಕೆ ಬುಧವಾರದಿಂದ ಶುರುವಾಗಲಿವೆ. ಪಠ್ಯಕ್ರಮ ಶುರು ಮಾಡುವ ಮೂಲಕ ಸಿದ್ಧತಾ ಕಲಿಕೆ ನಡೆಯಲಿದೆ. ಇದು ಒಂದು ವಾರದವರೆಗೂ ನಡೆಯಲಿದೆ. ಬಳಿಕ ಪಠ್ಯಕ್ರಮ ಪ್ರಕಾರ ಬೋಧನೆ ಕೈಗೊಳ್ಳಲಾಗುತ್ತದೆ.
ಸರ್ಕಾರಿ ಶಾಲೆಗಳಲ್ಲಿ ಎರಡು ದಿನ ಸಿದ್ಧತಾ ಕಾರ್ಯ ಕೈಗೊಳ್ಳಲಾಗುತ್ತದೆ. ಮೇ 31ರಂದು ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ನಡೆಯಲಿದೆ. ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಶಾಲೆ ಆರಂಭಕ್ಕೂ ಎರಡು ದಿನಗಳ ಮೊದಲೇ ಕೆಲಸಕ್ಕೆ ಹಾಜರಾಗಲಿದ್ದಾರೆ. ಅಗತ್ಯ ಸಿದ್ಧತೆ ಮಾಡಿಕೊಳ್ಳಲಿದ್ದು, ಶಾಲಾ ಆವರಣ, ಕೊಠಡಿ, ಶೌಚಗೃಹಗಳನ್ನು ಸ್ವಚ್ಛಗೊಳಿಸಲಾಗುತ್ತದೆ.
31ರ ಪ್ರಾರಂಭೋತ್ಸವಕ್ಕೆ ಮಾವಿನ ತೋರಣ, ಬಾಳೆಕಂಬ ಕಟ್ಟಿ, ರಂಗೋಲಿ ಬಿಡಿಸಿ ಶಾಲೆಗಳನ್ನು ಸಿಂಗಾರ ಮಾಡಲು ಯೋಜಿಸಲಾಗಿದೆ. ಮೊದಲ ದಿನ ಹಬ್ಬದ ಸಂಭ್ರಮದ ಮೂಲಕ ಮಕ್ಕಳನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಕೇಸರಿಬಾತ್, ಹೆಸರುಬೇಳೆ ಪಾಯಸ ಇಲ್ಲವೆ ಯಾವುದಾದರೂ ಒಂದು ಸಿಹಿ ತಿನಿಸು ನೀಡಲಾಗುತ್ತದೆ. ಈಗಾಗಲೇ ಆಹಾರ ಪದಾರ್ಥವನ್ನೂ ದಾಸ್ತಾನು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಎಚ್.ಕೆ.ಪಾಂಡು ತಿಳಿಸಿದ್ದಾರೆ
2024-25ನೇ ಸಾಲಿನ ಶಿಕ್ಷಣವನ್ನು ‘ಶೈಕ್ಷಣಿಕ ಬಲವರ್ಧನೆ’ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷ ವಾಕ್ಯದಲ್ಲಿ ಸಜ್ಜಾಗಿದೆ.
ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. 2,236 ಸರ್ಕಾರಿ ಶಾಲೆಗಳಿಗೆ 30.5 ಲಕ್ಷ ಉಚಿತ ಪುಸ್ತಕಗಳಿಗೆ ಬೇಡಿಕೆಯಿದ್ದು, 19.64 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ. ಬಿಇಒಗಳಿಗೆ 18.13 ಲಕ್ಷ ಪುಸ್ತಕಗಳು ತಲುಪಿವೆ. ಖಾಸಗಿ ಶಾಲೆಗಳಿಗೆ 18.7 ಲಕ್ಷ ಪುಸ್ತಕಗಳ ಬೇಡಿಕೆಯಿದ್ದು, 11.74 ಲಕ್ಷ ಪೂರೈಕೆಯಾಗಿದೆ. ಶಾಲೆಗಳಿಗೆ ಶೇ.59.46ರಷ್ಟು ಉಚಿತ ಪುಸ್ತಕಗಳು ತಲುಪಿವೆ. ಖಾಸಗಿ ಶಾಲೆಗಳಿಗಾಗಿ ಮಾರಾಟಕ್ಕೆ ಶೇ.60ರಷ್ಟು ಪೂರೈಕೆಯಾಗಿವೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಕ್ರಿಯೆ ಬುಧವಾರದಿಂದ ಶುರುವಾದರೆ, ಖಾಸಗಿ ಶಾಲೆಗಳಲ್ಲಿ ದಾಖಲಾತಿ ಬಹುತೇಕ ಪೂರ್ಣಗೊಂಡಿವೆ. ಜನವರಿಯಿಂದ ಖಾಸಗಿ ಶಾಲೆಗಳು ಎಲ್‌ಕೆಜಿ ಮತ್ತು 1ನೇ ತರಗತಿಗೆ ಮಕ್ಕಳು ಪ್ರವೇಶ ಪಡೆದುಕೊಂಡಿವೆ. ಶುಲ್ಕ, ವಂತಿಕೆಯನ್ನೂ ಈಗಾಗಲೇ ಪಾಲಕರಿಂದ ಸಂಗ್ರಹಿಸಿವೆ. ಇದರೊಂದಿಗೆ ಪುಸ್ತಕ, ನೋಟ್‌ಬುಕ್, ಸಮವಸ್ತ್ರ ಇತರ ಕಲಿಕಾ ಸಾಮಗ್ರಿಗಳನ್ನು ಈಗಾಗಲೇ ವಿತರಿಸಿದ್ದು, ಅದಕ್ಕೆ ಅಗತ್ಯ ಶುಲ್ಕವನ್ನು ಪಡೆದುಕೊಂಡಿವೆ. ಹೀಗಾಗಿ, ಇಂದು ಭಾರವಾದ ಬ್ಯಾಗ್‌ನೊಂದಿಗೆ ಮಕ್ಕಳು ಅನುದಾನ ರಹಿತ ಶಾಲೆಗಳಿಗೆ ತೆರಳಲಿದ್ದಾರೆ.
ಹಳೇ ವಿದ್ಯಾರ್ಥಿಗಳು ಏನೋ ಮುಂದಿನ ತರಗತಿಗೆ ಮುಂಬಡ್ತಿ ಪಡೆದುಕೊಂಡರು. ಆದರೆ, ಹೊಸ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿಲ್ಲ. ಜತೆಗೆ, ಸರ್ಕಾರಿ ಶಾಲಾ ಮಕ್ಕಳ ಕೈಗೆ ಪುಸ್ತಕ, ಸಮವಸ್ತ್ರ ಸೇರಿಲ್ಲ. ಹೀಗಾಗಿ, ಹಳೇ ಸಮವಸ್ತ್ರ, ಬಣ್ಣ ಬಣ್ಣದ ಉಡುಪು ತೊಟ್ಟು ಮಕ್ಕಳು ಶಾಲೆಗೆ ಹಾಜರಾಗಲಿದ್ದಾರೆ.
ಜಿಲ್ಲೆಯಲ್ಲಿ 3,446 ಶಾಲೆಗಳಿವೆ. 2,112 ಸರ್ಕಾರಿ, 114 ಸಮಾಜ ಕಲ್ಯಾಣ ಮತ್ತು ಗಿರಿಜನ ಇಲಾಖೆ, 267 ಅನುದಾನಿತ, 927 ಖಾಸಗಿ, 16 ಕೇಂದ್ರ ಸರ್ಕಾರ ಅಧೀನ ಶಾಲೆಗಳು (ಕೇಂದ್ರೀಯ ವಿದ್ಯಾಲಯ, ನವೋದಯ, ಟಿಬೆಟಿಯನ್ ಶಾಲೆ) ಇವೆ. ಕಳೆದ ವರ್ಷ 4.21 ಲಕ್ಷ ವಿದ್ಯಾರ್ಥಿಗಳು ಓದುತ್ತಿದ್ದರು. ಇದರಲ್ಲಿ ಬಹುತೇಕ ವಿದ್ಯಾರ್ಥಿಗಳು ಮುಂದಿನ ತರಗತಿ ತೇರ್ಗಡೆಯಾಗಿದ್ದು, ಕೆಲವರು ಪಿಯುಸಿ ಕಾಲೇಜಿಗೆ ಬಡ್ತಿ ಪಡೆದುಕೊಂಡಿದ್ದರೆ, ಎಲ್‌ಕೆಜಿ, 1ನೇ ತರಗತಿಗೆ ಹೊಸ ವಿದ್ಯಾರ್ಥಿಗಳ ಆಗಮನವಾಗಿದೆ.