ಶಾಲಾ ಆರಂಭೋತ್ಸವದ ಸಂಭ್ರಮ ; ಮೊದಲ ದಿನ ಶೇ.39.45 ಮಕ್ಕಳು ಹಾಜರಿ

1 mbl ph 2
Published on

ಕೋಲಾರ: ಕರೊನಾ ನಂತರದಲ್ಲಿ ಹೊಸ ವರ್ಷದ ದಿನವಾದ ಶುಕ್ರವಾರ ಶಾಲೆಗಳು ಶುಭಾರಂಭಗೊಂಡಿದ್ದು, ಉತ್ಸಾಹದಿಂದ ತರಗತಿಗಳಿಗೆ ಬಂದ ವಿದ್ಯಾರ್ಥಿಗಳನ್ನು ಕೋವಿಡ್ ಮಾರ್ಗಸೂಚಿ ಪಾಲಿಸಿ ಹಬ್ಬದ ವಾತಾವರಣದಲ್ಲಿ ಶಿಕ್ಷಕರು ಸ್ವಾಗತಿಸಿದರು.

ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಒಟ್ಟು 1, 11,013 ಮಂದಿ ದಾಖಲಾಗಿದ್ದು, 43799 ಮಕ್ಕಳು ಹಾಜರಾಗುವ ಮೂಲಕ ಶೇ.39.45 ಮಕ್ಕಳು ಹಾಜರಾಗಿದ್ದು, ಒಟ್ಟಾರೆ ಮೊದಲ ದಿನ ಶೇ.39.45 ಮಕ್ಕಳು ಶಾಲೆಗಳಿಗೆ ಬಂದಿದ್ದರು.

10399 ಮಂದಿ ಹಾಜರು: ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳಲ್ಲಿ ವಿದ್ಯಾಗಮಕ್ಕೆ 6ನೇ ತರಗತಿಗೆ 23055 ಮಕ್ಕಳ ಪೈಕಿ 8172 ಮಕ್ಕಳು ಹಾಜರಾಗಿದ್ದಾರೆ. 7ನೇ ತರಗತಿಗೆ 23128 ಮಕ್ಕಳು ದಾಖಲಾಗಿದ್ದು, ಮೊದಲ ದಿನ 8410, 8ನೇ ತರಗತಿಗೆ ದಾಖಲಾಗಿರುವ 21929 ಮಕ್ಕಳಲ್ಲಿ 8726 ಹಾಗೂ 9ನೇ ತರಗತಿಗೆ ದಾಖಲಾದ 21756 ಮಕ್ಕಳ ಪೈಕಿ 8092 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಎಸ್ಸೆಸ್ಸೆಲ್ಸಿ ತರಗತಿ ಶಾಲೆಗಳು ಇಂದಿನಿಂದಲೇ ಆರಂಭಗೊಂಡಿದ್ದು, 21145 ಮಕ್ಕಳ ಪೈಕಿ ಮೊದಲ ದಿನ ಶಾಲೆಗೆ 10399 ಮಕ್ಕಳು ಹಾಜರಾಗಿದ್ದಾರೆ.

ಜಾಗೃತಿಗೆ ಮೀಸಲು: ವಿದ್ಯಾರ್ಥಿಗಳು ಪಾಳಿ ಪದ್ಧತಿಯಂತೆ ಶಾಲೆಗೆ ಬರಬೇಕಿದ್ದರೂ ಮಾಹಿತಿ ಕೊರತೆಯಿಂದ 8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಹಾಜರಾಗಿದ್ದು ಅನೇಕ ಕಡೆ ಕಂಡು ಬಂತು. ಬಂದ ಮಕ್ಕಳನ್ನು ಪರಸ್ಪರ ನಂತರ ಕಾಪಾಡಿಕೊಂಡು ಆವರಣದಲ್ಲಿ ಕೂರಿಸಿದ ಶಿಕ್ಷಕರು ಕರೊನಾ ಸಂದರ್ಭದಲ್ಲಿ ವಹಿಸಬೇಕಾದ ಜಾಗೃತಿ, ಮಾರ್ಗಸೂಚಿ ಪಾಲನೆ ಕುರಿತು ಮಾರ್ಗದರ್ಶನ ನೀಡಿ ಯಾವ ಯಾವ ತರಗತಿಗಳ ಮಕ್ಕಳು ಯಾವ ದಿನ ಶಾಲೆಗೆ ಬರಬೇಕು ಎಂಬ ಬಗ್ಗೆ ತಿಳಿ ಹೇಳಿದರು.

ಗ್ರಾಮೀಣದಲ್ಲಿ ಹೆಚ್ಚು ಸ್ಪಂದನೆ: ನಗರ ಪ್ರದೇಶಕ್ಕಿಂತ ಗ್ರಾಮೀಣ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿತ್ತು. ಸರ್ಕಾರದ ಸೂಚನೆಯಂತೆ ಶುಕ್ರವಾರದಿಂದ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ತರಗತಿ ಆರಂಭಗೊಂಡಿದ್ದು, ಉಳಿದ 6ರಿಂದ 9 ಮತ್ತು 11ನೇ ತರಗತಿಗಳ ವಿದ್ಯಾಗಮವೂ ಆರಂಭಗೊಂಡಿದೆ ಎಂದು ಡಿಡಿಪಿಐ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಮಾರ್ಗಸೂಚಿ ಪಾಲನೆ: ಶಾಲೆಗಳನ್ನು ತಳಿರು ತೋರಣ, ರಂಗೋಲಿಯಿಂದ ಸಿಂಗರಿಸಲಾಗಿತ್ತು. ಶಿಕ್ಷಕರು ವಿದ್ಯಾರ್ಥಿಗಳನ್ನು ದ್ವಾರದಲ್ಲಿ ಸ್ವಾಗತಿಸಿ ಬರಮಾಡಿಕೊಂಡರು. ಅಂತರ ಕಾಯ್ದುಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡಿ ಸರದಿ ಸಾಲಿನಲ್ಲಿ ಬಂದ ಮಕ್ಕಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಸ್ಯಾನಿಟೈಸರ್ ನೀಡಿ ಒಳ ಬರಮಾಡಿಕೊಳ್ಳಲಾಯಿತು. ಡಿಡಿಪಿಐ ಕೃಷ್ಣಮೂರ್ತಿ, ಬಿಇಒ ಕೆ.ಎಸ್.ನಾಗರಾಜಗೌಡ, ಶಿಕ್ಷಣಾಧಿಕಾರಿಗಳಾದ ನಾಗೇಂದ್ರಪ್ರಸಾದ್, ಸಿ.ಆರ್.ಅಶೋಕ್ ಮತ್ತಿತರರು ವಿವಿಧ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲ ದಿನವಾದ್ದರಿಂದ ಶೇ. 39.45 ಮಾತ್ರ ಹಾಜರಾತಿ ಇತ್ತು. ಜ.4ರಿಂದ ಪೂರ್ಣ ಪ್ರಮಾಣದ ಹಾಜರಾತಿ ಇರಲಿದೆ. ಪಾಳಿ ಮತ್ತು ದಿನ ಬಿಟ್ಟು ದಿನ ಶಾಲೆಗೆ ಬರಬೇಕಾಗಿರುವ ಕುರಿತು ಮಕ್ಕಳಿಗೆ ಶಾಲೆಗಳಲ್ಲಿ ಮಾರ್ಗದರ್ಶನ ನೀಡಲಾಗಿದೆ. ಕೃಷ್ಣಮೂರ್ತಿ, ಡಿಡಿಪಿಐ ಕೋಲಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net