

| ವೇಣುವಿನೋದ್ ಕೆ.ಎಸ್. ಮಂಗಳೂರು
ವರ್ಗಾವಣೆ ಪತ್ರ ಬೇಕಿದ್ದರೆ ಶುಲ್ಕ ಪಾವತಿಸಿ, ಇಲ್ಲವಾದರೆ ಕೊಡಲ್ಲ! ಇದು ಬೆಂಗಳೂರಿನ ಖಾಸಗಿ ಶಾಲೆಯೊಂದರ ನಿಲುವು. ಶಾಲೆಯ ಈ ನಡೆಯಿಂದಾಗಿ ಮಂಗಳೂರಿನ ಬಡ ಮಹಿಳೆಯೊಬ್ಬರು ತಮ್ಮ ಮಗನ ಶಾಲಾ ಪ್ರವೇಶಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ವಣವಾಗಿದೆ.
ಕೋವಿಡ್ನಿಂದಾಗಿ ಮಕ್ಕಳ ಶಿಕ್ಷಣಕ್ಕೆ ದೊಡ್ಡ ಹೊಡೆತ ಬಿದ್ದಿದೆ, ಉದ್ಯೋಗ ಕಡಿತದ ಕಾರಣದಿಂದಾಗಿ ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ, ಅನುದಾನಿತ ಶಾಲೆಗೆ ಸೇರುವ ಪ್ರಸಂಗ ಹೆಚ್ಚುತ್ತಿದೆ. ಈ ನಡುವೆ ವಿದ್ಯಾರ್ಥಿಗಳು ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳಿಗೆ ಸೇರಿ ಯಾವುದೋ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬೇರೆ ಸರ್ಕಾರಿ ಅಥವಾ ಅನುದಾನ ರಹಿತ ಶಾಲಾ ಕಾಲೇಜಿಗೆ ಸೇರುವುದಾದರೆ ತಕ್ಷಣ ವರ್ಗಾವಣೆ ಪತ್ರ ನೀಡತಕ್ಕದ್ದು ಎನ್ನುವ ಸರ್ಕಾರದ ಆದೇಶವೂ ಬಂದಿದೆ (25-11-2021ರ ಆದೇಶ). ಆದರೆ ಈ ಆದೇಶವನ್ನು ಮೂಲೆಗೆ ಎಸೆದಿರುವ ಬೆಂಗಳೂರಿನ ಶಾಲೆಯೊಂದರ ಮುಖ್ಯಸ್ಥರಿಂದಾಗಿ ಮಂಗಳೂರಿನ ಬಡಕುಟುಂಬಕ್ಕೆ ಸಂಕಷ್ಟ ಎದುರಾಗಿದೆ. ಸದ್ಯ ಮೇಲಿಂದ ಮೇಲೆ ಬೆಂಗಳೂರಿನ ಶಾಲೆಗೆ ಪತ್ರ ಬರೆದರೂ ಫೋನ್ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಅಷ್ಟೇ ಅಲ್ಲ. ಸದ್ಯ ಇವರ ಮಗ ಸೇರಿರುವ ಮಂಗಳೂರಿನ ಬೆಸೆಂಟ್ ಶಾಲೆಯ ಮುಖ್ಯಸ್ಥರೇ ಬೆಂಗಳೂರಿನ ಶಾಲೆಗೆ ಪತ್ರ ಬರೆದು ಟಿಸಿ ಕಳುಹಿಸಿಕೊಡುವಂತೆ ಕೋರಿದ್ದಾರೆ, ಅದಕ್ಕೂ ಆ ಶಾಲೆಯವರು ಸೊಪ್ಪು ಹಾಕಿಲ್ಲ.
ಕುಂದಾಪುರದ ಮಹಿಳೆ: ಇದು ಮೂಲತಃ ಕುಂದಾಪುರದ ಪ್ರೇಮಾ ಶೆಟ್ಟಿ ಎಂಬ ಮಹಿಳೆಯ ಕಥೆ. ಇವರ ಪತಿ ಸುಧೀರ್ ಉಡುಪಿ ಜಿಲ್ಲಾ ಸಶಸ್ತ್ರ ದಳದ ಕಾನ್ಸ್ಟೆಬಲ್ ಆಗಿದ್ದವರು. 8 ವರ್ಷದ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಬಳಿಕ ಬದುಕು ಕಟ್ಟಿಕೊಳ್ಳಲು ಇಬ್ಬರು ಮಕ್ಕಳೊಂದಿಗೆ ಪ್ರೇಮಾ ಬೆಂಗಳೂರಿಗೆ ತೆರಳಿ ಗಾರ್ಮೆಂಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಲೇ ತಮ್ಮ ಪುತ್ರಿ, ಪುತ್ರನನ್ನೂ ಶಾಲೆಗೆ ಸೇರಿಸಿದ್ದರು. ಈ ನಡುವೆ ಅವರಿಗೆ ಕೆಲಸ ಕಳೆದುಕೊಳ್ಳಬೇಕಾಯಿತು. ಇನ್ನೊಂದೆಡೆ, ಪತಿಯ ಮರಣದ ಹಿನ್ನೆಲೆಯಲ್ಲಿ ಅವರು ಅನುಕಂಪದ ಆಧಾರದ ಮೇಲೆ ಉಡುಪಿ ಜಿಲ್ಲೆಯಲ್ಲಿ ನೌಕರಿಗೂ ಯತ್ನ ಮಾಡುತ್ತಿದ್ದಾರೆ. ಅದಕ್ಕಾಗಿ ಪದೇಪದೆ ಉಡುಪಿಗೆ ಹೋಗಬೇಕಿರುವುದರಿಂದ ಮಂಗಳೂರಿಗೆ ಬರುವುದು ಅನಿವಾರ್ಯ. ಹಾಗಾಗಿ ಮಂಗಳೂರಿಗೆ ಸ್ಥಳಾಂತರಗೊಂಡರು. ಬೆಂಗಳೂರಿನ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಪೂರೈಸಿದ ಬಳಿಕ ಮಂಗಳೂರಿಗೆ ಮರಳಿದ ಈ ಕುಟುಂಬದ ಬಾಲಕ ಅಲ್ಲಿನ ಶಾಲೆಗೆ ಸೇರಿದ್ದಾನೆ. ಪ್ರಸ್ತುತ ಪ್ರೇಮಾ ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ಪತ್ರ ಬರೆದಿದ್ದಾರೆ. ಅವರಿಂದ ಇದುವರೆಗೆ ಸ್ಪಂದನೆ ಬಂದಿಲ್ಲ. ಮಂಗಳೂರಿನ ಬೆಸೆಂಟ್ ರಾಷ್ಟ್ರೀಯ ಪ್ರೌಢಶಾಲೆ(ಕನ್ನಡ ಮಾಧ್ಯಮ)ದಲ್ಲಿ ಸದ್ಯ ಪ್ರೇಮಾ ಅವರ ಪುತ್ರ ತೇಜಸ್ ಸೇರ್ಪಡೆಯಾಗಿದ್ದು ಅಲ್ಲಿ ಮುಂದುವರಿಯಬೇಕಾದರೆ ವರ್ಗಾವಣೆ ಪತ್ರ ಬೇಕು.
ಈ ವಿಚಾರ ಗಮನಕ್ಕೆ ಬಂದಿದೆ. ಬೆಂಗಳೂರಿನ ಶಾಲೆಯಾದ್ದರಿಂದ ಅಲ್ಲಿನ ಬಿಇಒಗೆ ನಾನು ಪತ್ರ ಬರೆದು ವಿಚಾರ ತಿಳಿಸುತ್ತೇನೆ, ಡಿಡಿಪಿಐ ಅವರ ಗಮನಕ್ಕೂ ತರಲಾಗುವುದು. | ಸದಾನಂದ್ ಕ್ಷೇತ್ರ ಶಿಕ್ಷಣಾಧಿಕಾರಿ, ಮಂಗಳೂರು ಉತ್ತರ
ಫೀಸ್ ಕಟ್ಟಿದ್ರೆ ಮಾತ್ರ ಟಿಸಿ!: ಪ್ರೇಮಾ ಅವರ ಮಗ 8ನೇ ತರಗತಿಗೆಂದು 2020ರ ಡಿಸೆಂಬರ್ನಲ್ಲಿ ಬೆಂಗಳೂರಿನ ಗೊಟ್ಟಿಗೆರೆಯ ಪಬ್ಲಿಕ್ ಶಾಲೆಯೊಂದಕ್ಕೆ ಸೇರ್ಪಡೆಯಾಗಿದ್ದ. ಅಲ್ಲಿ ಶುಲ್ಕ 10 ಸಾವಿರ ರೂ.ಪಾವತಿ ಮಾಡಲಾಗಿದೆ. ಎರಡು ತಿಂಗಳು ಮಾತ್ರವೇ ಶಾಲೆ ನಡೆದಿದ್ದು ಲಾಕ್ಡೌನ್ ಕಾರಣ ಕುಟುಂಬ ಊರಿಗೆ ಮರಳಿದೆ. ಮೇ ತಿಂಗಳಲ್ಲಿ ಪರೀಕ್ಷೆ ಇಲ್ಲದೆ ಎಲ್ಲರನ್ನೂ ಉತ್ತೀರ್ಣ ಎಂದು ಘೊಷಿಸಲಾಗಿತ್ತು. ಆ ಬಳಿಕ 2021ರ ಆಗಸ್ಟ್ನಲ್ಲಿ ಮಂಗಳೂರಿನ ಬೆಸೆಂಟ್ ಶಾಲೆಗೆ ತೇಜಸ್ನನ್ನು ದಾಖಲಿಸಲಾಗಿತ್ತು. ಆದರೆ ಬೆಂಗಳೂರಿನ ಶಾಲೆಯವರು ತಮ್ಮ ಶುಲ್ಕ 40 ಸಾವಿರ ರೂ. ನೀಡಿದರೆ ಮಾತ್ರ ಟಿಸಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಬೆಸೆಂಟ್ ಶಾಲೆಯವರು ಎರಡು ಬಾರಿ, ಪ್ರೇಮಾ ಅವರು ಕೂಡ ಆ ಶಾಲೆಗೆ ಎರಡು ಬಾರಿ ಪತ್ರ ಬರೆದಿದ್ದಾರೆ. ಫೋನ್ ಮಾಡಿದರೂ, ಶುಲ್ಕ ಪಾವತಿಗೆ ಒತ್ತಾಯ ಹೇರುತ್ತಿದ್ದಾರೆ ಎನ್ನುತ್ತಾರೆ ಪ್ರೇಮಾ.