

ಕೆ.ಆರ್.ಪೇಟೆ: ಶಾಲೆಗಳು ವಿದ್ಯಾದಾನದ ಕೇಂದ್ರಗಳಾಗಿದ್ದು, ಪ್ರತಿ ವರ್ಷ ಸಾವಿರಾರು ವಿದ್ಯಾವಂತರನ್ನು ತಯಾರು ಮಾಡುವ ಕಾರ್ಖಾನೆಗಳಂತೆ ಕೆಲಸ ನಿರ್ವಹಿಸುತ್ತಿವೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಪಟ್ಟಣದ ಕೆಪಿಎಸ್ ಶಾಲೆಯಲ್ಲಿ ನೂತನ ಕಟ್ಟಡ ಹಾಗೂ ಶೌಚಗೃಹಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಲಕ್ಷಾಂತರ ವಿದ್ಯಾರ್ಥಿಗಳಿಗೆ ಜ್ಞಾನ ಒದಗಿಸುವ ಶಾಲೆಗಳು ಭವ್ಯ ಭಾರತದ ಪ್ರಜೆಗಳನ್ನು ತಯಾರು ಮಾಡುವ ಕಾರ್ಖಾನೆಗಳಿದ್ದಂತೆ. ಹೀಗಾಗಿ ಅವುಗಳಿಗೆ ಎಲ್ಲ ರೀತಿಯ ಸೌಕರ್ಯ ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ ಎಂದರು.
ಶಾಲೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗುತ್ತಿದೆ. ಪಟ್ಟಣದ ಕೆಪಿಎಸ್ ಶಾಲೆ ಮತ್ತು ಕಿಕ್ಕೇರಿ ಶಾಲೆಗೆ ತಲಾ ನಾಲ್ಕು ಕೊಠಡಿ ಮತ್ತು ಹೈಟೆಕ್ ಶೌಚಗೃಹ ನಿರ್ಮಾಣ ಮಾಡಲು 1.30 ಕೋಟಿ ರೂ. ವ್ಯಯಿಸಲಾಗುತ್ತಿದೆ. ಗುತ್ತಿಗೆದಾರರು ಗುಣಮಟ್ಟ ಕಾಮಗಾರಿ ಮಾಡುವ ಮೂಲಕ ಶಾಲಾ ಕಟ್ಟಡಗಳು ದೀರ್ಘಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳಬೇಕು ಎಂದರು.
ಪಟ್ಟಣದ ಕೆಪಿಎಸ್ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷ ಸಿ.ಬಿ.ಚೇತನ್‌ಕುಮಾರ್, ಬಿಇಒ ವೈ.ಕೆ.ತಿಮ್ಮೇಗೌಡ, ಪುರಸಭಾ ಮಾಜಿ ಸದಸ್ಯರಾದ ಕೆ.ಆರ್.ಪುಟ್ಟಸ್ವಾಮಿ, ಮಂಜುಳಮ್ಮ, ಉಪಪ್ರಾಂಶುಪಾಲ ಎಚ್.ವಿ.ತಿಮ್ಮೇಗೌಡ, ಜೆಡಿಎಸ್ ಮುಖಂಡ ಮಹದೇವ ಶಾಸಕರ ಆಪ್ತ ಸಹಾಯಕ ಪ್ರತಾಪ್, ಧ್ರುವ, ಸೇರಿದಂತೆ ಹಲವರಿದ್ದರು.