

ಮೈಸೂರು: ಶಾಲೆಗಳು ಶಿಕ್ಷಣದ ಜತೆಗೆ ಮೌಲ್ಯಗಳನ್ನು ಕಟ್ಟಿಕೊಡಬೇಕು ಎಂದು ಸಂವಿಧಾನ ವಿಶ್ಲೇಷಕ, ಕರ್ನಾಟಕ ರಾಜ್ಯ ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸುಧಾಕರ ಹೊಸಳ್ಳಿ ಕರೆ ನೀಡಿದರು.
ಮೇಟಗಳ್ಳಿ ರಾಧಾನಂದ ಎಜುಕೇಷನಲ್ ಟ್ರಸ್ಟಿನ ಸಹನಾ ಕಾನ್ವೆಂಟ್ ಜಗನ್ಮೋಹನ ಅರಮನೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ 22ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮೊದಲೆಲ್ಲ ಶಾಲೆಗಳು ಎಂದರೆ ಹೊಟ್ಟೆ- ಬಟ್ಟೆಗೆ ದಾರಿ ಮಾಡಿಕೊಡುವ, ಬದುಕನ್ನು ಕಟ್ಟಿಕೊಡುವ ದೇಗುಲಗಳು ಎಂದು ಹೇಳಲಾಗುತ್ತಿತ್ತು. ಆದರೆ ಶಾಲೆಗಳು ನಿಜವಾಗಿಯೂ ನಾಡನ್ನು ಕಟ್ಟುವ, ಬದುಕನ್ನು ಕಟ್ಟುವ ಸೌಧಗಳಾಗಿವೆ ಎಂದರು.
ಇಡೀ ಜಗತ್ತಿಗೆ ನಾಗರಿಕತೆ, ಶಿಕ್ಷಣ ಕೊಟ್ಟಿದ್ದು ಭಾರತ. ಅದು ಈ ನೆಲಮೂಲದ ಸಂಸ್ಕೃತಿಯಿಂದ ಬಂದಿದೆ. ಸಂವಿಧಾನದಲ್ಲಿ ಅಡಕವಾಗಿರುವ ಅಂಶಗಳು ನಮ್ಮ ರಾಮಾಯಣ, ಮಹಾಭಾರತದಲ್ಲಿಯೂ ಇವೆ. ಋಗ್ವೇದದಲ್ಲಿಯೇ ಆಹಾರ ಮತ್ತು ಸೂರು ವಿಚಾರದಲ್ಲಿ ಎಲ್ಲರೂ ಸಮಾನರು ಎಂದು ಹೇಳಲಾಗಿದೆ. ಗಾಂಧಿ ಹಾಗೂ ಅಂಬೇಡ್ಕರ್ ಇಬ್ಬರೂ ಸಮಾನತೆ ಬಯಸಿದವರು. ಎರಡು ದೇಶಗಳ ನಡುವೆ ಯುದ್ಧವಾದರೆ ಭಾರತ ಮಧ್ಯಸ್ಥಿಕೆ ವಹಿಸಬೇಕು ಎಂಬಷ್ಟರ ಮಟ್ಟಿಗೆ ನಮ್ಮ ದೇಶ ವಿಶ್ವಗುರುವಾಗಿ ಬೆಳೆಯುತ್ತಿದೆ. ಆದರೆ ಪರಕೀಯತೆಯನ್ನು ಅನುಕರಿಸಲು ಮುಂದಾಗಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಪರಿಪೂರ್ಣ ವ್ಯಕ್ತಿವಿಕಸನ ಕೇವಲ ಪಠ್ಯದಿಂದ ಸಾಧ್ಯವಾಗದು. ಪಠ್ಯೇತರ ಚಟುವಟಿಕೆಗಳು ಕೂಡ ಮುಖ್ಯವಾಗುತ್ತವೆ. ಮಕ್ಕಳ ಆಸಕ್ತಿ ಗಮನಿಸಿ, ಪೋಷಕರು ಪ್ರೋತ್ಸಾಹಿಸಬೇಕು. ಮಕ್ಕಳನ್ನು ಟಿವಿ ಹಾಗೂ ಮೊಬೈಲ್‌ಗಳಿಂದ ಆದಷ್ಟು ದೂರವಿಟ್ಟು, ಗ್ರಂಥಾಲಯದ ಕಡೆ ಹೋಗುವಂತೆ ಮಾಡಬೇಕು ಎಂದರು.
ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎಂ.ಎಸ್.ಮಧುಸೂದನ್, ಮುಖ್ಯಶಿಕ್ಷಕಿ ಸಿ.ಎಸ್.ಅನಿತಾ, ಪುಷ್ಪಾ ಶ್ರೀನಿವಾಸನ್, ವಿಜಯಲಕ್ಷ್ಮೀ ಸೀತಾರಾಮಯ್ಯ, ರಾಧಾಕೃಷ್ಣನ್, ವೆಂಕಟೇಶ್, ಮಂಜುನಾಥ್, ಶಿಲ್ಪಾ, ಅಯ್ಯಪ್ಪ ಇತರರು ಇದ್ದರು.