ಹೋಗೋಣ ಶಾಲೆಗೆ: ನಾಳೆಯಿಂದ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ತರಗತಿ

Suresh Kuamr
Published on

ಬೆಂಗಳೂರು: ಕರೊನಾ ಮಹಾಮಾರಿ ಕಾಲಿಟ್ಟ ಬಳಿಕ ಸತತ 9 ತಿಂಗಳು ಮನೆಯ ನಾಲ್ಕು ಗೋಡೆಗಳ ನಡುವೆಯೇ ಆಟ,ಪಾಠಕ್ಕೆ ಸೀಮಿತವಾಗಿದ್ದ ರಾಜ್ಯದ ಮಕ್ಕಳು 2021ರ ಹೊಸ ವರ್ಷದ ಮೊದಲನೇ ದಿನ ಶಾಲೆ ಮೆಟ್ಟಿಲು ಹತ್ತಲು ಅಣಿಯಾಗಿದ್ದಾರೆ. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಜತೆಗೆ 6ರಿಂದ 9ನೇ ವರ್ಗದ ವಿದ್ಯಾಗಮ ತರಗತಿಗಳು ಜ.1ರಂದು ಆರಂಭವಾಗಲಿವೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಬುಧವಾರ ಬೆಂಗಳೂರಿನ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ಪೂರ್ವಸಿದ್ಧತೆ ವೀಕ್ಷಿಸಿ, ಕರೊನಾ ಆತಂಕಕ್ಕೆ ಒಳಗಾಗದಂತೆ ಶಿಕ್ಷಕರು ಹಾಗೂ ಮಕ್ಕಳಿಗೆ ಆತಸ್ಥೈರ್ಯ ತುಂಬಿದರು.

ಸಿದ್ಧತೆ ಪೂರ್ಣ: ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ತರಗತಿ ಆರಂಭಕ್ಕೆ ಸಜ್ಜಾಗಿದ್ದಾರೆ. ಬುಧವಾರ ರಾಜ್ಯದ ಹಲವೆಡೆ ಶಾಲೆ ಸ್ವಚ್ಛಗೊಳಿಸುವುದು, ಸ್ಯಾನಿಟೈಸ್ ಮಾಡುವುದು ಸೇರಿ ಪೂರ್ವಸಿದ್ಧತೆ ಕಾರ್ಯವನ್ನು ಪೂರ್ಣಗೊಳಿಸಲಾಗಿದೆೆ.

ಶೈಕ್ಷಣಿಕ ಚಟುವಟಿಕೆ ಆರಂಭ:

ಕರೊನಾ ಸಂಕಷ್ಟದ ನಡುವೆ ಶಾಲೆಗೆ ಪ್ರವೇಶಿಸುವ ವಿದ್ಯಾರ್ಥಿಗಳಲ್ಲಿ ಮೊದಲ ದಿನ ಸಕಾರಾತ್ಮಕ ಭಾವನೆ ಮೂಡಿಸುವ ಉದ್ದೇಶದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮ, ಶಾಲಾ ಆವರಣ ಸಿಂಗರಿಸಲು ಇಲಾಖೆ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಆಯಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಸೂಚಿಸಿದ್ದಾರೆ.

ಪ್ರತಿ ವರ್ಷ ಮೇ ಅಂತ್ಯದಲ್ಲಿ ಮಕ್ಕಳೇ ಶಾಲೆಯ ಆವರಣ ಸ್ವಚ್ಛಗೊಳಿಸಿ, ಮಾವಿನ ಎಲೆಗಳ ತಳಿರು ತೋರಣ ಕಟ್ಟಿ, ಸಿಹಿ ಹಂಚಿ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಭ್ರಮಿಸುತ್ತಿದ್ದರು. ಆದರೆ, ಈ ಬಾರಿ ಕರೊನಾ ಭೀತಿಯಿಂದ ಈ ಪ್ರಕ್ರಿಯೆಗಳಿಗೆ ಬ್ರೇಕ್ ಬಿದ್ದಿದೆ. ಈಗಾಗಲೇ ನೇಮಕಗೊಂಡಿರುವ ನೋಡಲ್ ಅಧಿಕಾರಿಗಳೇ ತಮ್ಮ ವ್ಯಾಪ್ತಿಯ ಶಾಲಾ ಹಂತದ ತಯಾರಿಯ ಬಗ್ಗೆ ಪರಿಶೀಲನೆ ನಡೆಸಿ, 10ನೇ ತರಗತಿಯ ಪ್ರಾರಂಭೋತ್ಸವ ಹಾಗೂ ವಿದ್ಯಾಗಮ ಕಾರ್ಯಕ್ರಮ ಆರಂಭದ ಬಗ್ಗೆ ಪರಿಶೀಲಿಸಿ ಆಯುಕ್ತಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.

ಶಾಲೆಗಳ ತಯಾರಿ ಏನು?

ತರಗತಿ ಹಾಗೂ ವಿದ್ಯಾಗಮಕ್ಕೆ ಸಂಬಂಧಿಸಿದ ವೇಳಾಪಟ್ಟಿ, ವಿದ್ಯಾರ್ಥಿಗಳ ತಂಡ ರಚನೆ, ಸಮಯದ ವಿಂಗಡಣೆ ಇನ್ನಿತರ ಸಿದ್ಧತೆ ಕಾರ್ಯಗಳು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ತರಗತಿಗಳ ಜತೆಗೆ ಶಾಲಾವಠಾರದಲ್ಲೇ 6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮವೂ ನಡೆಯಲಿದೆ. ತರಗತಿಗೆ ಸಮಸ್ಯೆ ಆಗದಂತೆ ಸಾಮಾಜಿಕ ಅಂತರದಡಿ ಪಠ್ಯ ಬೋಧಿಸಲು ಬೇಕಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಮಕ್ಕಳಿಗೆ ಸಂತಸ

ಕಳೆದ ಕೆಲ ತಿಂಗಳಿಂದ ಮನೆಯಲ್ಲೇ ಇದ್ದು ಬೇಸತ್ತಿದ್ದ ವಿದ್ಯಾರ್ಥಿಗಳು ಶಾಲೆ ಆರಂಭವಾಗುವ ಸುದ್ದಿ ತಿಳಿಯುತ್ತಿದ್ದಂತೆ ಸಂತಸ ವ್ಯಕ್ತಪಡಿಸಿದ್ದಾರೆ. ಪಾಲಕರೂ ಮುಂಜಾಗ್ರತಾ ಕ್ರಮದೊಂದಿಗೆ ಮಕ್ಕಳನ್ನು ಶಾಲೆಗೆ ಕಳಿಸಲು ಉತ್ಸುಕರಾಗಿದ್ದಾರೆ. ಶಾಲೆಗೆ ಹೋಗಿ ಪಠ್ಯ ಅಭ್ಯಸಿಸಿದರೆ ಸೂಕ್ತವಾಗಿ ಅರ್ಥವಾಗುತ್ತದೆ. ಆನ್​ಲೈನ್ ಮೂಲಕ ಸರಿಯಾಗಿ ಪಠ್ಯ ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ಅವಕಾಶಗಳ ಬಗ್ಗೆ ತಿಳಿಹೇಳಿ

*ಶಿಕ್ಷಣ ಸಂಸ್ಥೆಗಳಿಗೆ ಸಚಿವರ ಸಲಹೆ

ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಎಸ್​ಎಸ್​ಎಲ್​ಸಿ ಮತ್ತು ದ್ವಿತೀಯ ಪಿಯು ತರಗತಿಗಳ ಮಹತ್ವ, ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಈ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದರೆ ಭವಿಷ್ಯದಲ್ಲಿ ಹೆಚ್ಚಿನ ಅವಕಾಶಗಳಿರುವ ಬಗ್ಗೆ ಮೊದಲ ದಿನವೇ ವಿದ್ಯಾರ್ಥಿಗಳಿಗೆ ತಿಳಿಹೇಳಬೇಕೆಂದು ಸಚಿವ ಸುರೇಶ್​ಕುಮಾರ್ ಶಾಲೆ- ಕಾಲೇಜು ಆಡಳಿತ ಮಂಡಳಿಗಳಿಗೆ ಸೂಚನೆ ನೀಡಿದ್ದಾರೆ. ಮಕ್ಕಳನ್ನು ಶಾಲೆಗೆ ಕಳಿಸಲು ಪಾಲಕರು ಉತ್ಸಾಹ ಹೊಂದಿದ್ದು, ಪ್ರಥಮ ಪಿಯುಸಿ ತರಗತಿಗಳನ್ನೂ ಆರಂಭಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂಬ ಅಂಶವನ್ನು ಶಾಲಾಡಳಿತ ಮಂಡಳಿ ಸಿಬ್ಬಂದಿ, ಶಿಕ್ಷಕರು, ಉಪನ್ಯಾಸಕರು ಸಚಿವರ ಗಮನಕ್ಕೆ ತಂದರು. ಪರಿಸ್ಥಿತಿಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ನಿರ್ಧಾರಕ್ಕೆ ಬರಲಾಗುವುದು ಎಂದು ಸಚಿವರು ಉತ್ತರಿಸಿದರು.

ಶಾಲೆ ಬಿಟ್ಟ ಮಕ್ಕಳ ಪತ್ತೆಗೆ ಮನೆ ಮನೆ ಸಮೀಕ್ಷೆ

ಬೆಂಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗೆ- ಅಂಗನವಾಡಿಗೆ ಕರೆ ತರಲು ನಿಖರ ಕಾರ್ಯಕ್ರಮ ಕೈಗೊಂಡು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರ ಜವಾಬ್ದಾರಿ ನೀಡಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರು, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ- ಆಶಾ ಕಾರ್ಯಕರ್ತೆಯರನ್ನೊಳಗೊಂಡ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆ ಮನೆ ಮನೆ ಸಮೀಕ್ಷೆ ನಡೆಸಬೇಕೆಂದು ಸರ್ಕಾರ ಹೇಳಿದೆ. 2021ರ ಜನವರಿ ಮತ್ತು ಫೆಬ್ರವರಿಯಲ್ಲಿ ಶಿಕ್ಷಣ ಕಾರ್ಯಪಡೆಯು ಮಹಿಳಾ ಸ್ವಸಹಾಯ ಸಂಘಗಳ ಪ್ರತಿನಿಧಿಗಳ ಮೂಲಕ ಸಮೀಕ್ಷೆ ನಡೆಸಿ ಶಾಲೆಗೆ ದಾಖಲಾಗದ, ದಾಖಲಾದರೂ ಹಾಜರಾಗದ ಮಕ್ಕಳನ್ನು ಗುರುತಿಸುವುದು, ವಿಶೇಷ ಮನವೊಲಿಕೆ ಕಾರ್ಯಕ್ರಮ ಅವಶ್ಯವಿದ್ದಲ್ಲಿ ಶಾಲೆಯ ಮುಖ್ಯಶಿಕ್ಷಕರಿಂದ ಈ ಕಾರ್ಯ ಮಾಡಿಸಬೇಕಾಗುತ್ತದೆ.

ಶಿಕ್ಷಣ ಸಚಿವರ ನಿರ್ದೇಶನ

  • ಪ್ರತಿ ವಿದ್ಯಾರ್ಥಿ ಹಾಗೂ ಶಿಕ್ಷಕರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯ
  • ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಿ
  • ಶಾಲೆ- ಕಾಲೇಜು ಆವರಣದಲ್ಲಿ ವ್ಯಕ್ತಿಗತ ಅಂತರ ಕಾಪಾಡಿ, ಎಸ್ಸೆಸ್ಸೆಲ್ಸಿ , ದ್ವಿತೀಯ ಪಿಯುಸಿ ತರಗತಿಗಳ ಮಹತ್ವ , ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದರೆ ಭವಿಷ್ಯ ಉತ್ತಮವಾಗುತ್ತದೆ ಎಂಬುದರ ಬಗ್ಗೆ ತಿಳಿಹೇಳಿ

ಶಾಲೆಗಳ ಹೊಣೆ ಏನು?

  • ಅಂತರ ಕಾಯ್ದುಕೊಂಡು ಪಠ್ಯ ಬೋಧಿಸಬೇಕು
  • ಮೊದಲ ದಿನ ಕರೊನಾ ಮುನ್ನೆಚ್ಚರಿಕಾ ಕ್ರಮದ ಬಗ್ಗೆ ಮಾಹಿತಿ ನೀಡುವುದು
  • ಸರಳವಾಗಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಆಯೋಜನೆ
  • ಮಧ್ಯಾಹ್ನದ ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಣೆ
  • ಕರೊನಾ ಪರೀಕ್ಷೆ ಫಲಿತಾಂಶದೊಂದಿಗೆ ಶಾಲೆಗೆ ಆಗಮನ
  • ಫೇಸ್ ಶೀಲ್ಡ್ ಧರಿಸುವುದು, ಮಕ್ಕಳ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವತ್ತ ಗಮನ
  • ಮಕ್ಕಳ ಆರೋಗ್ಯ, ರೋಗಲಕ್ಷಣಗಳ ಬಗ್ಗೆಯೂ ಗಮನ
  • ತರಗತಿಯಲ್ಲಿ ಕಡಿಮೆ ಮಕ್ಕಳನ್ನು ವ್ಯಕ್ತಿಗತ ಅಂತರದಲ್ಲಿ ಕೂರಿಸುವುದು
  • ಶಾಲೆ ಮುಗಿದ ಬಳಿಕ ಶಾಲಾವರಣ, ತರಗತಿ ಕೊಠಡಿ ಮತ್ತು ಶೌಚಗೃಹ ಸ್ಯಾನಿಟೈಸ್ ಮಾಡಬೇಕು
  • ಇಲಾಖೆ ನಿಗದಿಪಡಿಸುವ ಪಠ್ಯಕ್ರಮವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವುದು
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net