

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಲು ಸರ್ಕಾರ ವಿವಿಧ ಕ್ರಮಗಳನ್ನು ಅನುಸರಿಸುತ್ತಿದೆ. ಜತೆಗೆ ಅಗತ್ಯ ಪೋಷಕಾಂಶವುಳ್ಳ ಆಹಾರವನ್ನೂ ವಿತರಿಸುತ್ತಿದೆ. ಹೀಗಿದ್ದೂ ಕೆಲ ಭಾಗದ ವಿದ್ಯಾರ್ಥಿಗಳು ಇಂದಿಗೂ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಈ ಸೂಕ್ಷ್ಮತೆಯನ್ನು ಅರಿತುಕೊಂಡ ವಿದ್ಯಾರ್ಥಿನಿಯೊಬ್ಬರು ನಿತ್ಯ ಸರ್ಕಾರಿ ಶಾಲಾ ಮಕ್ಕಳಿಗೆ ಬಾಳೆಹಣ್ಣು ವಿತರಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಪೌಷ್ಟಿಕಾಂಶ ಹೆಚ್ಚಳವಾಗಲು ನೆರವಾಗಿದ್ದಾರೆ.
ಬೆಳ್ಳಂದೂರಿನ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಸುಮಾರು 400 ವಿದ್ಯಾರ್ಥಿಗಳಿದ್ದು, ಬಹುತೇಕರು ವಲಸೆ ಕಾರ್ಮಿಕರ ಮಕ್ಕಳಾಗಿದ್ದಾರೆ. ಮನೆಯ ಆರ್ಥಿಕ ಸಮಸ್ಯೆ ಇತ್ಯಾದಿ ಕಾರಣಗಳಿಂದ ಬಹುತೇಕ ವಿದ್ಯಾರ್ಥಿಗಳು ಬೆಳಗ್ಗಿನ ಉಪಾಹಾರ ಸೇವಿಸದೆ ಶಾಲೆಗೆ ಬರುತ್ತಿದ್ದರು. ಪರಿಣಾಮ ಕೆಲ ವಿದ್ಯಾರ್ಥಿಗಳು ಶಾಲೆಯಲ್ಲಿ ಹಸಿವಿನಿಂದ ಬಳಲುತ್ತಿದ್ದರು. ಇದರಿಂದ ಪಠ್ಯದ ಕಡೆಗೆ ಗಮನ ನೀಡಲು ಸಾಧ್ಯವಾಗುತ್ತಿರಲಿಲ್ಲ. ಇದನ್ನರಿತ ಬೆಳ್ಳಂದೂರು ನಿವಾಸಿ, ಇನ್ವೆಂಚರ್ ಅಕಾಡೆಮಿಯ 12 ಗ್ರೇಡ್ ವಿದ್ಯಾರ್ಥಿನಿ ಸಾ ಶ್ರೀಕಾಂತ್ ವಿದ್ಯಾರ್ಥಿಗಳಿಗೆ ನಿರಂತರ ಒಂದು ವರ್ಷ ಬಾಳೆಹಣ್ಣು ವಿತರಿಸಿದ್ದಾರೆ. ಈಗ ಮತ್ತೆ ವಿತರಣೆ ಕಾರ್ಯಕ್ರಮವನ್ನು ಮುಂದುವರಿಸಲು ಸಾ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ.
'ಹಂಗ್ರಿ ನೋ ಮೋರ್' ಅಭಿಯಾನ ಆರಂಭಿಸಿ ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶ ಆಹಾರ ವಿತರಿಸಿದ್ದಾರೆ. ಇದಕ್ಕಾಗಿ ಸ್ನೇಹಿತರು, ಸಂಬಂಧಿಕರಿಂದ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ. ಬಳಿಕ ಬೆಳ್ಳಂದೂರಿನಲ್ಲಿದ್ದ ಅಂಗಡಿಯೊಂದರಿಂದ ನಿತ್ಯ ಬಾಳೆಹಣ್ಣುಗಳನ್ನು ಖರೀದಿಸಿ, ಬೆಳಗ್ಗೆ ವಿದ್ಯಾರ್ಥಿಗಳಿಗೆ ಹಂಚಿದ್ದಾರೆ. ಜತೆಗೆ ಪೌಷ್ಟಿಕಾಂಶದ ಆಹಾರ ಕೊರತೆಯಿಂದ ಮಕ್ಕಳಲ್ಲಿ ಏನೆಲ್ಲ ಆರೋಗ್ಯ ಸಮಸ್ಯೆಗಳಾಗುತ್ತವೆ ಎಂಬ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದಲ್ಲದೆ, ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕವನ್ನೂ ವಿತರಿಸಿದ್ದಾರೆ.
ಬೆಳ್ಳಂದೂರಿನ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಶೌಚಗೃಹ ಸಮಸ್ಯೆಯಿತ್ತು. ಇದರಿಂದ ವಿದ್ಯಾರ್ಥಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿತ್ತು. ಸಮಸ್ಯೆ ಸರಿಪಡಿಸುವ ನಿಟ್ಟಿನಲ್ಲಿ ಕೆಲ ಸಂಸ್ಥೆಗಳ ಸಹಕಾರದೊಂದಿಗೆ ಸಾ, ಶಾಲಾ ಆವರಣದಲ್ಲಿ ಶೌಚಗೃಹ ನಿರ್ಮಿಸಿದ್ದಾರೆ.