ಶಾಲೆಯಲ್ಲಿನ ಬಿಸಿಯೂಟದ ಅಡುಗೆ ಅನಿಲ ಸಿಲಿಂಡರ್ ಕದ್ದು ಪರಾರಿಯಾದ ಕಳ್ಳರು

lpg-agencoes-3-1200x675
Published on

ಚಿಕ್ಕಬಳ್ಳಾಪುರ: ದೇವಾಲಯಗಳು, ಮನೆಗಳ ಕಳ್ಳತನದ ನಡುವೆ ಕಳ್ಳರು ಶಾಲೆಗಳಲ್ಲೂ ಕೈ ಚಳಕ ತೋರಿಸುತ್ತಿದ್ದಾರೆ. ರಾತ್ರಿ ವೇಳೆ ಬೀಗ ಜಡಿದು ಸಿಕ್ಕಿದ ವಸ್ತುವನ್ನು ಕದ್ದು ಪರಾರಿಯಾಗುತ್ತಿದ್ದಾರೆ. ಗುಡಿಬಂಡೆ ತಾಲೂಕಿನ ಗಂಧಂನಾಗೇನಹಳ್ಳಿಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಬಳಸುವ ಅಡುಗೆ ಅನಿಲ ಸಿಲಿಂಡರ್ ತೆಗೆದುಕೊಂಡು ಕಳ್ಳರು ಪರಾರಿಯಾಗಿದ್ದಾರೆ.

ಇಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಂದು ಅಡುಗೆ ಕೋಣೆಯ ಬೀಗ ತೆಗೆಯಲು ಮುಂದಾಗ, ಆಗಾಗಲೇ ಯಾರೋ ಬಾಗಿಲು ಮುರಿದು ಒಳಗೆ ಹೋಗಿರುವುದು ಗೊತ್ತಾಗಿದೆ. ಹಾಗೆಯೇ ಬಿಸಿಯೂಟಕ್ಕಾಗಿ ಅಡುಗೆ ಮಾಡುವ ಗ್ಯಾಸ್ ಸ್ಟೌವ್ ಗೆ ಅಳವಡಿಸಿದ್ದ ಸಿಲೆಂಡರ್ ಇರಲಿಲ್ಲ ಎಂದು ಶಾಲಾ ಮುಖ್ಯ ಶಿಕ್ಷಕ ಎನ್. ಚೌಡಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಜಿಲ್ಲೆಯ ವಿವಿಧ ಶಾಲೆಗಳಲ್ಲಿ ನಿರಂತರವಾಗಿ ಅಡುಗೆ ಅನಿಲ ಸಿಲಿಂಡರ್ ಕಳವು ಪ್ರಕರಣಗಳು ವರದಿಯಾಗುತ್ತಿವೆ. ಕಳ್ಳರು ಸರ್ಕಾರಿ ಶಾಲೆಗಳಲ್ಲಿ ರಾತ್ರಿ ವೇಳೆ ಯಾವುದೇ ಭದ್ರತೆ ಇಲ್ಲದಿರುವುದನ್ನು ಉಪಯೋಗಿಸಿಕೊಂಡು ಕಳ್ಳತನ ಮಾಡುತ್ತಿದ್ದಾರೆ. ಕಂಪ್ಯೂಟರ್, ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ಸಿಕ್ಕ ಸಿಕ್ಕ ಉಪಕರಣಗಳನ್ನು ತೆಗೆದುಕೊಂಡು ಪರಾರಿಯಾಗುತ್ತಿದ್ದಾರೆ.

ಬಹುತೇಕ ಕಡೆ ಜೂಜು ಅಡ್ಡೆಗಳು ಪೊಲೀಸರ ಭಯವಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಹಣವನ್ನು ಕಳೆದುಕೊಂಡವರು, ಜೂಜಿಗೆ ಹಣವನ್ನು ಬಯಸುವವರು ಇಂತಹ ಕಳ್ಳತನ ಪ್ರಕರಣಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net