

ಬಿ.ರಾಘವೇಂದ್ರ ಪೈ ಗಂಗೊಳ್ಳಿ
ಕುಂದಾಪುರ ತಾಲೂಕಿನ ಬೈಂದೂರು ವಲಯದ ಹೊಸಾಡು ಗ್ರಾಮದ ಕಂಚುಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಗ ನವವಧುವಿನಂತೆ ಕಂಗೊಳಿಸುತ್ತಿದ್ದು, ಗೋಡೆ ಮೇಲೆ ಬಿಡಿಸಿದ ಚುಕುಬುಕು ರೈಲಿನ ಚಿತ್ತಾರ ನೋಡುಗರ ಗಮನ ಸೆಳೆಯುತ್ತಿದೆ.
1948ರಲ್ಲಿ ಕಂಚುಗೋಡುವಿನಲ್ಲಿ ಪ್ರಾರಂಭಗೊಂಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಜ್ರಮಹೋತ್ಸವ ಸಂಭ್ರಮದಲ್ಲಿದೆ. ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ಪ್ರಸ್ತುತ 62 ಮಕ್ಕಳು ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹಳೇ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ, ಶಾಲೆಯ ಶಿಕ್ಷಕರು, ದಾನಿಗಳ ಸಹಕಾರ ಮತ್ತು ಕರ್ಣಾಟಕ ಬ್ಯಾಂಕ್‌ನವರ ಕೊಡುಗೆಯಿಂದ ಎರಡು ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ಬಣ್ಣ ಬಳಿದು ಸೌಂದರ್ಯ ಹೆಚ್ಚಿಸುವಂತೆ ಮಾಡಲಾಗಿದೆ. ಶಾಲೆಯ ಗೋಡೆ ಚುಕುಬುಕು ರೈಲಿನ ಚಿತ್ತಾರದಿಂದ ಕಂಗೊಳಿಸುತ್ತಿದ್ದು ನೋಡುಗರ ಗಮನ ಸೆಳೆಯುವಂತೆ ಮಾಡಿದೆ. ಕೊಂಕಣ ರೈಲು ಮಾದರಿಯಂತೆ ಹೋಲುವ ಶಾಲೆ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಶಾಲೆಯ ಹಳೇ ವಿದ್ಯಾರ್ಥಿ ಉಮೇಶ್ ದೇವಾಡಿಗ ಎಂಬುವರ ಕೈ ಚಳಕದಲ್ಲಿ ಶಾಲೆಯ ಗೋಡೆಗಳ ಮೇಲೆ ಮೂಡಿ ಬಂದಿರುವ ರೈಲಿನ ಚಿತ್ತಾರ ಮಕ್ಕಳಿಗೆ ರೈಲನ್ನೇ ನೋಡಿದಂಥ ಸಂಭ್ರಮದಲ್ಲಿ ತೇಲಿಸುತ್ತಿದೆ.
ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ಊರಿನ ಹಾಗೂ ಪರಿಸರದ ಮಕ್ಕಳು ಇತರ ಶಾಲೆಗಳಿಗೆ ವಲಸೆ ಹೋಗಿದ್ದರ ಪರಿಣಾಮ ದಾಖಲಾತಿ ಇಳಿಮುಖವಾಗಿ ಶಾಲೆ ಮುಚ್ಚುವ ಸ್ಥಿತಿಗೆ ತಲುಪಿತ್ತು. ನಾಲ್ಕು ವರ್ಷಗಳಿಂದ 1ರಿಂದ 7ನೇ ತರಗತಿವರೆಗಿನ ಮಕ್ಕಳಿಗೆ ಶಾಲೆಗೆ ಬರಲು ಉಚಿತ ವಾಹನದ ವ್ಯವಸ್ಥೆ, ಉಚಿತ ಪುಸ್ತಕ ಮತ್ತು ಬ್ಯಾಗ್ ವಿತರಿಸಲಾಗುತ್ತಿದ್ದು, ಪ್ರತಿಯೊಂದು ಮಕ್ಕಳ ಹುಟ್ಟುಹಬ್ಬ ಕೂಡ ಶಾಲೆಯಲ್ಲಿ ಆಚರಿಸಲಾಗುತ್ತಿದೆ. ಹೀಗಾಗಿ ಮಕ್ಕಳ ದಾಖಲಾತಿಯಲ್ಲಿ ಗಣನೀಯ ಏರಿಕೆ ಕಂಡುಬಂದಿದ್ದು, ಸದ್ಯ ಶಾಲೆಯ ಕಟ್ಟಡದ ರೈಲಿನ ಚಿತ್ತಾರದ ವಿನ್ಯಾಸ ಶಾಲೆಯ ಗಮನ ಸೆಳೆಯುವಂತೆ ಮಾಡಿದೆ.
ಶಾಲೆಯಲ್ಲಿ ಮೂಲಸೌಕರ್ಯ ಕೊರತೆಯಿಂದ ನಮ್ಮೂರ ಮಕ್ಕಳು ಇತರ ಶಾಲೆಗಳಿಗೆ ವಲಸೆ ಹೋಗಿದ್ದರ ಪರಿಣಾಮ ದಾಖಲಾತಿ ಕಡಿಮೆಯಾಗಿ ಶಾಲೆ ಮುಚ್ಚುವ ಸ್ಥಿತಿಯಲ್ಲಿತ್ತು. ನಮ್ಮೂರ ಶಾಲೆ ಉಳಿಸಿಕೊಳ್ಳಬೇಕೆಂದು 2016-17ರಲ್ಲಿ ಹಳೇ ವಿದ್ಯಾರ್ಥಿ ಸಂಘ ರಚನೆ ಮಾಡಿ ಮನೆ ಮನೆಗೆ ಭೇಟಿ ನೀಡಿ ವಾಹನದ ಮೂಲಕ ಮಕ್ಕಳನ್ನು ಶಾಲೆಗೆ ಕರೆತರಲು ವ್ಯವಸ್ಥೆ ಮಾಡಲಾಯಿತು. ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ, ವಾಹನದ ನಿರ್ವಹಣೆ ಸೇರಿದಂತೆ ವರ್ಷಕ್ಕೆ ಸುಮಾರು ಒಂದು ಲಕ್ಷ ರೂ.ಗೂ ಅಧಿಕ ಹಣ ವ್ಯಯವಾಗುತ್ತಿದೆ. ದಾನಿಗಳು ಶಾಲೆ ಅಭಿವೃದ್ಧಿಗೆ ಸಹಕಾರ ನೀಡಬೇಕು.
ಚೌಕಿ ಅಶೋಕ ಖಾರ್ವಿ, ಕಂಚುಗೋಡು ಶಾಲೆ ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ
ಹಳೇ ವಿದ್ಯಾರ್ಥಿ ಸಂಘ, ಎಸ್‌ಡಿಎಂಸಿ, ದಾನಿಗಳು, ಊರವರು, ಶಿಕ್ಷಕರು, ಕರ್ಣಾಟಕ ಬ್ಯಾಂಕ್ ಸಹಕಾರದಿಂದ ಎರಡು ಲಕ್ಷ ರೂ. ವೆಚ್ಚದಲ್ಲಿ ಶಾಲೆಗೆ ರೈಲಿನ ಮಾದರಿಯಲ್ಲಿ ಬಣ್ಣ ಬಳಿಯಲಾಗಿದೆ. ಶಾಲೆಯ ಅಭಿವೃದ್ಧಿಗೆ ಎಲ್ಲರೂ ಸ್ಪಂದಿಸಬೇಕು.
ವಿಮಲಾ ಸುರೇಶ ನಾಯ್ಕ, ಎಸ್‌ಡಿಎಂಸಿ ಅಧ್ಯಕ್ಷೆ