ಶಿಕ್ಷಣ ಸಚಿವರ ತವರಲ್ಲೇ ಮಕ್ಕಳಿಂದ ಶಾಲಾ ಶೌಚಗೃಹ ಸ್ವಚ್ಛ

28bdvt1
ಭದ್ರಾವತಿ ತಾಲೂಕು ಗುಡ್ಡದ ನೇರಲೆಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶೌಚಗೃಹ ಸ್ವಚ್ಛ ಮಾಡುತ್ತಿರುವ ವಿದ್ಯಾರ್ಥಿಗಳು.
Published on

ಭದ್ರಾವತಿ: ಶಾಲೆಗಳಲ್ಲಿ ಮಕ್ಕಳಿಂದ ಶೌಚಗೃಹಗಳ ಸ್ವಚ್ಛಗೊಳಿಸುವ ಪ್ರಕರಣಗಳು ಪುನರಾವರ್ತನೆ ಆಗುತ್ತಿದ್ದು, ಇದೀಗ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲೂ ಇಂತಹ ಪ್ರಕರಣ ಬಯಲಾಗಿದೆ.

ಭದ್ರಾವತಿ ತಾಲೂಕಿನ ಗುಡ್ಡದ ನೇರಲೆಕೆರೆ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಗೃಹ ಸ್ವಚ್ಛಗೊಳಿಸುತ್ತಿರುವ ವಿಡಿಯೋ ವೈರಲ್ ಆಗಿದ್ದು ಶಾಲೆಯ ಪ್ರಭಾರ ಮುಖ್ಯಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ನಾಲ್ಕೈದು ದಿನಗಳ ಹಿಂದೆ ಇಬ್ಬರು ಮಕ್ಕಳು ಶೌಚಗೃಹ ಸ್ವಚ್ಛ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಬಿಇಒ ಹಾಗೂ ಡಿಡಿಪಿಐ ಕಚೇರಿಗೆ ಯಾರೋ ಕಳುಹಿಸಿದ್ದರು. ಇದನ್ನು ಗಮನಿಸಿದ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಹಾಗೂ ಬಿಇಒ ಎ.ಕೆ.ನಾಗೇಂದ್ರಪ್ಪ ಬುಧವಾರ ಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಂದ ಶೌಚಗೃಹ ಸ್ವಚ್ಛತೆ ಕುರಿತ ವಿಡಿಯೋಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕರಿಂದ ಹೇಳಿಕೆ ಪಡೆದಿದ್ದರು. ಶೌಚಗೃಹಕ್ಕೆ ನೀರು ಹಾಕಲು ಮಾತ್ರ ಹೇಳಿದ್ದೆವು. ಸ್ವಚ್ಛ ಮಾಡಲು ಹೇಳಿರಲಿಲ್ಲ ಎಂದು ಶಿಕ್ಷಕರು ಸ್ಪಷ್ಟನೆ ನೀಡಿದ್ದರು ಎಂದು ತಿಳಿದುಬಂದಿದೆ. ಆದರೆ ವಿಡಿಯೋದಲ್ಲಿ ಮಕ್ಕಳು ಬ್ರಷ್‌ನಿಂದ ಶೌಚಗೃಹ ತಿಕ್ಕುವುದು ಹಾಗೂ ನೀರು ಹಾಕುವುದು ಸ್ಪಷ್ಟವಾಗಿರುವುದರಿಂದ ಪ್ರಭಾರ ಮುಖ್ಯಶಿಕ್ಷಕ ಶಂಕರಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳಿಂದ ಶೌಚಗೃಹ ಸ್ವಚ್ಛಗೊಳಿಸಿದ ಪ್ರಕರಣ ಸಂಬಂಧ ಬಿಇಒ ನೀಡಿದ ದೂರಿನ ಮೇರೆಗೆ ಮುಖ್ಯಶಿಕ್ಷಕಿಯನ್ನು ಬಂಧಿಸಲಾಗಿತ್ತು. ಕೋಲಾರದಲ್ಲೂ ಶಾಲೆ ಆವರಣದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ನ್ನು ವಿದ್ಯಾರ್ಥಿಗಳಿಂದ ಸ್ವಚ್ಛಗೊಳಿಸಿದ್ದ ಘಟನೆ ವರದಿಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net