ಗ್ರಾಪಂ, ಪಾಲಿಕೆಗೆ ಶಾಲೆ ಶೌಚಗೃಹ ನಿರ್ವಹಣೆ: ಸಚಿವ ಸುರೇಶ್​ ಕುಮಾರ್​​

Suresh Kumar
Published on

ಸರ್ಕಾರಿ ಶಾಲೆಗಳ ಶೌಚಗೃಹ ನಿರ್ವಹಣೆಯನ್ನು ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯಿತಿ, ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗೆ ವಹಿಸಲು ಚಿಂತನೆ ಇದೆ ಎಂದು ಶಿಕ್ಷಣ ಸಚಿವ ಸುರೇಶ್​ಕುಮಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಂಡೆಪ್ಪ ಖಾಶೆಂಪುರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದ 48,008 ಶಾಲೆಗಳ ಪೈಕಿ 47,168 ಶಾಲೆಗಳಲ್ಲಿ ಶೌಚಗೃಹ ಇದೆ. ಅನೇಕ ಕಡೆ ನಿರ್ವಹಣೆ ಇಲ್ಲ, ಮತ್ತೆ ಕೆಲವೆಡೆ ಬಳಕೆಗೆ ಯೋಗ್ಯವಾಗಿಲ್ಲ ಎಂಬ ಅರಿವಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಒಂದು ವರ್ಷ ಸಮರೋಪಾದಿಯಲ್ಲಿ ಶೌಚಗೃಹ ನಿರ್ವಣಕ್ಕಾಗಿ ಕಾರ್ಯಕ್ರಮ ಹಾಕಿಕೊಳ್ಳುತ್ತಿದ್ದೇವೆ ಎಂದರು. ನರೇಗಾದಲ್ಲಿ ಅಗತ್ಯ ಇರುವೆಡೆ ಶೌಚಗೃಹ ನಿರ್ವಿುಸಲು ಉದ್ದೇಶಿಸಲಾಗಿದ್ದು, ಒಳ್ಳೆಯ ಕಟ್ಟಡ, ಶೌಚಗೃಹ, ಮೈದಾನ, ಸ್ಮಾರ್ಟ್​ಕ್ಲಾಸ್​ಗೆ ಅಗತ್ಯ ವಿದ್ಯುತ್ ಕೊರತೆ ಸೇರಿ ಅನೇಕ ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಅಂದಾಜು 4 ಸಾವಿರ ಕೋಟಿ ರೂ. ಬೇಕಾಗಬಹುದೆಂದು ಅಂದಾಜಿಸಿದ್ದೇವೆ ಎಂದು ವಿವರಿಸಿದರು. ಸಿಎಸ್​ಆರ್ ನಿಧಿ ಬಳಸಿಕೊಳ್ಳಿ ಎಂಬ ಎಚ್.ಕೆ.ಪಾಟೀಲ್ ಸಲಹೆಗೆ, ನಮಗೆ ಆ ಮೂಲದಿಂದ ಬೇಕಾಗುವಷ್ಟು ನಿಧಿ ಲಭ್ಯತೆ ಸಿಗುವುದಿಲ್ಲ. ಜತೆಗೆ ಕಾರ್ಪೆರೇಟ್ ಕಂಪೆನಿಗಳು ಬೆಂಗಳೂರು ಮತ್ತು ಸುತ್ತಮುತ್ತ ನೆರವಾಗಲು ಆಸಕ್ತಿ ವಹಿಸುತ್ತವೆ ವಿನಃ ದೂರುದೂರುಗಳ ಶಾಲೆ ಬಗ್ಗೆ ಗಮನ ಕೊಡಲ್ಲ ಎಂದು ಶಿಕ್ಷಣ ಸಚಿವರು ಉತ್ತರಿಸಿದರು. ಈ ಕಾರಣಕ್ಕೆ ಶಾಲೆಗಳ ಈ ಶೌಚಗೃಹಗಳನ್ನು ಗ್ರಾಪಂ ಮತ್ತು ಪಾಲಿಕೆಗಳಿಗೆ ನಿರ್ವಹಣೆ ಹೊಣೆ ವಹಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು. ನಿರ್ವಹಣೆ ಕೊರತೆ ಬಗ್ಗೆ ಗಮನ ಸೆಳೆದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಶೌಚಗೃಹಗಳಿಗೆ ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೆ ಸಮಸ್ಯೆಯಾಗಿದೆ. ಸೂಕ್ತ ನಿರ್ವಹಣೆಗೆ ಆದ್ಯತೆ ನೀಡದಿದ್ದರೆ ಹೊಸ ಶೌಚಗೃಹ ಕಟ್ಟಿದರೂ ಪ್ರಯೋಜನವೇನು? ಎಂದರು.

ಉಪ್ಪು ತಿಂದವು› ನೀರು ಕುಡಿಲೇಬೇಕು!: ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆ ಕಾಮಗಾರಿ ಬಗ್ಗೆ ಉತ್ತರಿಸಿದ ಶಿಕ್ಷಣ ಸಚಿವ ಸುರೇಶ್​ಕುಮಾರ್, 109 ಶಾಲೆ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಆದ್ಯತೆ ಮೇಲೆ ಮುಗಿಸುತ್ತೇವೆ. ಹೊಸದಾಗಿ 121 ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದರು. ಆರಗ ಜ್ಞಾನೇಂದ್ರ ಮಾತನಾಡಿ, ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಣ ಕೊಟ್ಟರೂ ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. 382 ಕೋಟಿ ರೂ. ಅನ್ನು ಬ್ಯಾಂಕ್ ಖಾತೆಯಲ್ಲಿಟ್ಟು ಅಧಿಕಾರಿಗಳು ಕುಳಿತಿದ್ದಾರೆ. ಒಂದಷ್ಟು ಅಕ್ರಮಗಳಾಗಿದ್ದು ತನಿಖೆ ನಡೆಸಬೇಕೆಂದರು. ಇದಕ್ಕುತ್ತರಿಸಿದ ಸಚಿವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.

361 ಪ್ರೌಢಶಾಲೆ ಉನ್ನತೀಕರಣ?

ರಾಜ್ಯದ 361 ಸರ್ಕಾರಿ ಪ್ರೌಢಶಾಲೆಗಳನ್ನು ಪದವಿಪೂರ್ವ ಕಾಲೇಜನ್ನಾಗಿ ಉನ್ನತೀಕರಿಸುವ ಪ್ರಸ್ತಾವನೆ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಆರಂಭಿಸುವ ಚಿಂತನೆಯಿದೆ ಎಂದು ಶಿಕ್ಷಣ ಸಚಿವ ಸುರೇಶ್​ಕುಮಾರ್ ಹೇಳಿದರು. ಪ್ರೌಢಶಾಲೆಗಳನ್ನು ಉನ್ನತೀಕರಿಸಲು ಮಾಹಿತಿ ಕ್ರೋಡೀಕರಿಸಲಾಗುತ್ತಿದೆ. ವಿವರಗಳನ್ನು ಆರ್ಥಿಕ ಇಲಾಖೆ ಸಹಮತಿಗೆ ಕಳಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net