ಸರ್ಕಾರಿ ಶಾಲೆಯ ಚಾವಣಿ ಸಿಮೆಂಟ್ ಕುಸಿತ, ಇಬ್ಬರ ಮಕ್ಕಳಿಗೆ ಗಾಯ

9
Published on

ಚಿಕ್ಕಬಳ್ಳಾಪುರ: ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡದ ಚಾವಣಿ ಸಿಮೆಂಟ್ ಕಲ್ಲುಗಳು ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಮುಗ್ಧ ಕಂದಮ್ಮಗಳ ತಲೆಗಳಿಗೆ ಹೊಲಿಗೆ ಹಾಕಿಸಿ, ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಾಗೇಪಲ್ಲಿ ತಾಲೂಕಿನ ಶಿವಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 3 ನೇ ತರಗತಿ ವಿದ್ಯಾರ್ಥಿನಿ ದೊಡ್ಡಿವಾರಪಲ್ಲಿ ನಂದಿತಾ ಹಾಗೂ ಗ್ಯಾದಿವಾಂಡ್ಲಪಲ್ಲಿಯ ಅಕ್ಷಯಾ ಗಾಯಾಳುಗಳು. ಶಾಲಾ ಕೊಠಡಿಯ ಚಾವಣಿಯ ಸಿಮೆಂಟ್ ಕಾಂಕ್ರೀಟ್ ವಿದ್ಯಾರ್ಥಿಗಳ ತಲೆ ಮೇಲೆ ಬಿದ್ದಿದೆ. ತಕ್ಷಣ ಗಾಯಾಳುಗಳಿಗೆ ಪಾತಪಾಳ್ಯ ಸರ್ಕಾರಿ ಆಸ್ಪತೆಯಲ್ಲಿ ಹೊಲಿಗೆ ಹಾಕಿಸಿ ಚಿಕಿತ್ಸೆ ನೀಡಲಾಗಿದೆ.

ಇಲ್ಲಿನ ಶಾಲೆಯಲ್ಲಿ 5 ಕೊಠಡಿಗಳಿದ್ದು ಒಂದರಿಂದ ಎಂಟನೇ ತರಗತಿವರೆಗೆ 105 ಮಕ್ಕಳು ಇದ್ದಾರೆ. 5 ಕೊಠಡಿಗಳ ಪೈಕಿ 2 ಕೊಠಡಿಗಳು ಮಳೆ ಬಂದರೆ ನೀರು ಸೋರುವ ಹಂತದಲ್ಲಿದ್ದರೆ, ಉಳಿದ 3 ಕೊಠಡಿಗಳು ಸಾಧಾರಣ ಸ್ಥಿತಿಯಲ್ಲಿವೆ. ಶಿಥಿಲಾವ್ಯಸ್ಥೆಯಲ್ಲಿರುವ ಶಾಲಾ ಕೊಠಡಿಗಳಲ್ಲಿ ಶಿಕ್ಷಕರು ಎಂದಿನಂತೆ ಮಕ್ಕಳಿಗೆ ಪಾಠ ಮಾಡುತ್ತಿದ್ದ ಸಮಯದಲ್ಲಿ ದಿಢೀರನೇ ಸಿಮೆಂಟ್ ಕಳಚಿ, ವಿದ್ಯಾರ್ಥಿಗಳ ತಲೆ ಮೇಲೆ ಬಿದ್ದಿವೆ. ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳು ಏಕಾಎಕಿ ಹೊರಗಡೆ ಓಡಿ ಬಂದಿದ್ದಾರೆ. ಇದರ ಬಗ್ಗೆ ಮಾಹಿತಿ ತಿಳಿದು ಲೋಕಾಯುಕ್ತ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದ್ದು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸುಮೋಟೋ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ.

ಆಂಧ್ರ ಗಡಿ ಭಾಗದಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ಕನಿಷ್ಠ ಮೂಲ ಸೌಕರ್ಯಗಳ ಕೊರತೆ ಮತ್ತು ದಾಖಲಾತಿ ಪ್ರಮಾಣ ಕುಸಿತದಿಂದ ಈಗಾಗಲೇ ೪೫ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇನ್ನಷ್ಟು ಶಾಲೆಗಳು ಮುಚ್ಚುವ ಹಂತದಲ್ಲಿವೆ. ಆದರೂ ನಿರ್ಲಕ್ಷ್ಯ ತೋರುತ್ತಿರುವುದು ದುರದೃಷ್ಟಕರ.

*ಶಾಲಾ ಕೊಠಡಿಯ ಚಾವಣಿಯ ಸಿಮೆಂಟ್ ಕಳಚಿ ಬಿದ್ದ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದೆ. ಕೂಡಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹಾಗೆಯೇ ಪ್ರಕರಣದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತರಲಾಗಿದೆ.

ಸಮಿವುಲ್ಲಾ, ಮುಖ್ಯ ಶಿಕ್ಷಕ, ಸರ್ಕಾರಿ ಶಾಲೆ ಶಿವಪುರ .

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net