ಶಿಕ್ಷಕಿಯನ್ನು ಬದಲಾಯಿಸಲು ಪಟ್ಟು -  ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋದ ಪಾಲಕರು

Published on

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಸರ್ಕಾರಿ ಶಾಲೆಯೊಂದರ ಶಿಕ್ಷಕಿಯನ್ನು ಬದಲಾಯಿಸಬೇಕೆಂಬ ಬೇಡಿಕೆಗೆ ಇಲಾಖೆಯಿಂದ ಸರಿಯಾದ ಸ್ಪಂದನೆ ಲಭಿಸಿಲ್ಲ ಎಂಬ ಕಾರಣಕ್ಕೆ ಪಾಲಕರು ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗಿದ್ದಾರೆ.

ಬೀರ್ನಹಿತ್ಲು ಶಾಲೆಯಲ್ಲಿ ಸದ್ಯ ೨೭ ಮಕ್ಕಳಿದ್ದು, ಈ ಶಾಲೆಯ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗೆ ಕೆಟ್ಟದಾಗಿ ನಿಂದಿಸುತ್ತಿದ್ದು, ಅವರನ್ನು ಶಾಲೆಯಿಂದ ತೆರವು ಮಾಡಬೇಕೆಂದು ಪಾಲಕರು ಇಲಾಖೆಗೆ ಮನವಿ ಸಲ್ಲಿಸಿದ್ದರು. ಎಸ್‌ಡಿಎಂಸಿಯೂ ಶಿಕ್ಷಕಿಯನ್ನು ಬೇರೆಡೆಗೆ ವರ್ಗಾವಣೆ ಮಾಡುವಂತೆ ಮನವಿ ನೀಡಿದ್ದರು. ದರೆ ಇಲಾಖೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾರೆ.

* ಕೆಲಸ ಮಾಡಲಾಗದ ಸ್ಥಿತಿ:

ಎರಡು ವರ್ಷದ ಹಿಂದೆ ಬೇರೆಡೆಗೆ ವರ್ಗಾವಣೆಯಾಗಿದ್ದ ಶಿಕ್ಷಕಿ ಸದ್ಯ ಬೀರ್ನಹಿತ್ಲು ಶಾಲೆಗೆ ಆಗಮಿಸುತ್ತಿದ್ದು, ಯಾರೊಬ್ಬರಲ್ಲೂ ಉತ್ತಮ ಬಾಂಧವ್ಯ ಹೊಂದಿಲ್ಲ ಎನ್ನಲಾಗಿದೆ. ಶಿಕ್ಷಕರ ಕೊಠಡಿಯಲ್ಲೂ ದೂರವಾಣಿಯಲ್ಲಿ ಸಂಭಾಷಣೆ ಮಾಡಿಕೊಂಡು ಕೂರುತ್ತಿದ್ದಾರೆ. ಇದನ್ನು ವಿರೋಧಿಸಿದವರಲ್ಲಿ ಕಿರುಚಾಡುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ಉಳಿದವರಿಗೆ ಕೆಲಸ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಶಾಲೆಯಿಂದ ಮಕ್ಕಳನ್ನು ಕರೆದುಕೊಂಡು ಹೋದ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಎರಡು ವರ್ಷದಿಂದ ಬೇರೆ ಶಾಲೆಗೆ ನಿಯೋಜನೆ ಮಾಡಿದ್ದು, ಮೂರನೇ ವರ್ಷದಲ್ಲಿ ಹಿಂದಿನ ಶಾಲೆಗೇ ಹೋಗುವುದಕ್ಕೆ ಪ್ರಾರಂಭಿಸಿದ್ದಾರೆ. ಪಾಲಕರು ಶಿಕ್ಷಕಿ ಬೈದ ಬಗ್ಗೆ ಹೇಳಿಕೆ ನೀಡಿದ್ದಾರೆ. ಲಿಖಿತವಾಗಿ ದೂರು ನೀಡಿಲ್ಲ. ಡಿಡಿಪಿಐ ಅವರಿಗೆ ಘಟನೆ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೆಳಗ್ಗೆ ಶಿಕ್ಷಕಿಗೆ ನೋಟಿಸ್ ಜಾರಿಗೊಳಿಸುತ್ತೇವೆ. ನಿಯಮಾನುಸಾರ ಕ್ರಮಕೈಗೊಳ್ಳುತ್ತೇವೆ.

| ಲೋಕೇಶ್ ಎಸ್.ಆರ್. ಕ್ಷೇತ್ರ ಶಿಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net