ಶಾಲೆ ಆರಂಭ: ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ

school start
Published on

ರಜೆ ಬಳಿಕ ಆರಂಭಗೊಂಡ ಶೈಕ್ಷಣಿಕ ವರ್ಷದ ಮೊದಲ ದಿನ ಶಾಲೆಗೆ ಹಾಜರಾದ ವಿದ್ಯಾರ್ಥಿಗಳ ಮೊಗದಲ್ಲಿ ಮಂದಹಾಸ, ಸರ್ಕಾರಿ ಶಾಲೆಗಳ ಆವರಣದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.

ಮಡಿಕೇರಿ ಸೇರಿದಂತೆ ಜಿಲ್ಲಾದ್ಯಂತ ಶಾಲೆಗಳಲ್ಲಿ ಎಸ್‌ಡಿಎಂಸಿ, ಶಿಕ್ಷಕ ಸಿಬ್ಬಂದಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಮುಂಜಾನೆಯೇ ಶಾಲಾ ಆವರಣಕ್ಕೆ ತೆರಳಿ ಮತ್ತೊಮ್ಮೆ ಸ್ವಚ್ಛಗೊಳಿಸಿ, ರಂಗೋಲಿ ಬಿಡಿಸಿ, ತಳಿರು-ತೋರಣಗಳಿಂದ ಅಲಂಕರಿಸಿ, ವಿದ್ಯಾರ್ಥಿಗಳನ್ನು ಸ್ವಾಗತಿಸಿ, ಸಿಹಿ ತಿನ್ನಿಸಿದ ದೃಶ್ಯಾವಳಿ ಎಲ್ಲೆಡೆ ಗೋಚರಿಸಿತು.

ನಗರದ ಸರ್ಕಾರಿ ಪ್ರಾಥಮಿಕ ಶಾಲೆ, ನಗರಸಭೆಯ ಹಿರಿಯ ಪ್ರಾಥಮಿಕ ಶಾಲೆ, ವಾಟೆಕಾಡಿನ ಸರ್ಕಾರಿ ಶಾಲೆ, ಗುಡ್ಡೆಹೊಸೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ತಾಲೂಕಿನ ಎಲ್ಲಾ ಶಾಲೆಗಳಲ್ಲೂ ಮಕ್ಕಳನ್ನು ಆತ್ಮಿಯವಾಗಿ ಶಾಲೆಗೆ ಬರಮಾಡಿಕೊಳ್ಳಲಾಯಿತು. ಮೊದಲ ದಿನದ ಸಂಭ್ರಮದಲ್ಲಿದ್ದ ವಿದ್ಯಾರ್ಥಿಗಳು ತಮ್ಮ ಸ್ನೆಹಿತರೊಂದಿಗೆ ಸಂತೋಷದಿಂದ ಬೆರತರು. ಮೊದಲ ದಿನ ಉತ್ತಮ ಹಾಜರಿ ಕಂಡು ಬರದಿದ್ದರೂ ವಿದ್ಯಾರ್ಥಿಗಳು ಸಂತೋಷದಿಂದಲೇ ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಂಡರು, ವಿದ್ಯಾರ್ಥಿಗಳಿಗೆ ಬಿಸಿಯೂಟವನ್ನು ನೀಡಲಾಯಿತು.

ಕಳೆದ ಒಂದು ವಾರದಿಂದ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ರಜೆಗಳನ್ನು ಘೋಷಿಸಲಾಗಿತ್ತು. ಕೆಲವರು ಶನಿವಾರ ಆದ್ದರಿಂದ ಜೂ.೨ರಿಂದ ಶಾಲೆ ಆರಂಭ ಎಂದು ಭಾವಿಸಿದ್ದರು. ಇವೆಲ್ಲದರ ನಡುವೆ ಪ್ರತಿಯೊಂದು ಶಾಲೆಗಳಲ್ಲಿಯೂ ೨೦-೫೦ ಮಕ್ಕಳು ಹಾಜರಾಗಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರಂಗಧಾಮಪ್ಪ, ಧಾರಾಕಾರ ಮಳೆಗೆ ಜಿಲ್ಲೆಯಲ್ಲಿ ರಜೆ ನೀಡಲಾಗಿತ್ತು. ಆದ್ದರಿಂದ ಮಕ್ಕಳಿಗೆ ಮೇ೩೧ ರಂದು ಆರಂಭದ ಬಗ್ಗೆ ಗೊಂದಲವಾಗಿತ್ತು. ಆದರೂ ಕೂಡ ಪ್ರತಿ ಶಾಲೆಗೆ ೨೦-೫೦ ಮಕ್ಕಳು ಹಾಜರಾಗಿದ್ದಾರೆ ಎಂಬ ಮಾಹಿತಿ ಶಾಲೆ ಮುಖ್ಯ ಶಿಕ್ಷಕರು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net