

ಸಿಂಧನೂರು: ತಾಲೂಕಿನ ಅಮರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗವನ್ನು ಗ್ರಾಮದ ಕೆಲ ವ್ಯಕ್ತಿಗಳು ಅತಿಕ್ರಮಿಸಿಕೊಂಡಿದ್ದು, ಕೂಡಲೇ ತೆರವುಗೊಳಿಸುವಂತೆ ಒತ್ತಾಯಿಸಿ ಶಾಲಾ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ 4 ಎಕರೆ 1 ಗುಂಟೆ ಸರ್ಕಾರಿ ಶಾಲೆಯ ಜಾಗವಿದೆ. ಇದರಲ್ಲಿ ಅನಧಿಕೃತವಾಗಿ ಗುಡಿಸಲು, ತಿಪ್ಪೆಗುಂಡಿ, ಬಣವೆಗಳನ್ನು ಹಾಕಿಕೊಂಡಿದ್ದು, ಗ್ರಾಮಸ್ಥರ ಮನವಿ ಮೇರೆಗೆ ಇಬ್ಬರು ಹೊರತು ಪಡಿಸಿ ಎಲ್ಲರೂ ತೆರವುಗೊಳಿಸಿದ್ದಾರೆ. ಆದರೆ, ಇಬ್ಬರು ವ್ಯಕ್ತಿಗಳು ಮಾತ್ರ ತೆರವುಗೊಳಿಸುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಪೊಲೀಸರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನೆ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮುಖಂಡರಾದ ಬಸವರಾಜಗೌಡ ಪೊಲೀಸ್ ಪಾಟೀಲ್, ಬಸವರಾಜ ಬಡಿಗೇರ್, ತಿಪ್ಪಣ್ಣ ಸಾಲಗುಂದ, ನಾಗರಾಜ ಬಾವಿತಾಳ, ಹೊಸಗೇರಪ್ಪ ಸಾಲಗುಂದಿ, ಅಂಬಣ್ಣ, ಕನಕಪ್ಪ, ಶರಣಪ್ಪ ಇದ್ದರು.