ಹಳೇ ಕಟ್ಟಡ ತೆರವಿಗೆ ಕ್ರಿಯಾಯೋಜನೆ ಸಿದ್ಧಪಡಿಸಿ

mkg
Published on

ಹರಿಹರ: ಡಿಆರ್‌ಎಂ ಪ್ರೌಢಶಾಲೆ ಸುತ್ತ ಕಾಂಪೌಂಡ್ ನಿರ್ಮಾಣಕ್ಕೆ ಹಾಗೂ ಹಳೆ ಕಟ್ಟಡ ತೆರವಿಗೆ ಲೋಕೋಪಯೋಗಿ ಇಲಾಖೆಯಿಂದ ಕ್ರಿಯಾ ಯೋಜನೆ ಸಿದ್ಧಪಡಿಸಿ ವರದಿ ನೀಡಲು ಶಿಕ್ಷಣ ಇಲಾಖೆ ಉಪನಿರ್ದೇಶಕ ಕೊಟ್ರೇಶ್ ಅವರು ಶಾಲೆಯ ಉಪ ಪ್ರಾಚಾರ್ಯ ಬಿ. ಸಿದ್ದರಾಮೇಶ್ ಅವರಿಗೆ ಸೂಚಿಸಿದ್ದಾರೆ.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರ ಕೋರಿಕೆ ಮೇರೆಗೆ ಗುರುವಾರ, ಶಾಲೆಗೆ ಭೇಟಿ ನೀಡಿ ಅಲ್ಲಿನ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಜಬಿವುಲ್ಲಾ ಮಾತನಾಡಿ, ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಪರೀಕ್ಷಾ ಕೊಠಡಿಗಳಿಲ್ಲ ಎಂದು ಪರೀಕ್ಷೆ ಶಾಲೆ ಮುಂಭಾಗ ಕಾಂಪೌಂಡ್ ಇಲ್ಲದಿರುವುದರಿಂದ ಪುಂಡರ ಹಾವಳಿಯಿಂದ ಶಾಲೆಗೆ ಧಕ್ಕೆಯಾಗುತ್ತಿದ್ದು, ಈ ಎಲ್ಲ ಸಮಸ್ಯೆಗೆ ಪರಿಹಾರ ನೀಡಬೇಕೆಂದು ಮನವಿ ಮಾಡಿದರು.

ಉಪ ಪ್ರಾಚಾರ್ಯ ಬಿ. ಸಿದ್ದರಾಮೇಶ್ ಮಾತನಾಡಿ, ಎರಡರಿಂದ ನಾಲ್ಕು ಹೆಚ್ಚುವರಿ ಕೊಠಡಿಗಳ ಅವಶ್ಯವಿದ್ದು, ಹಳೆಯ ಕಟ್ಟಡವನ್ನು ತೆರವುಗೊಳಿಸಲು ಈಗಾಗಲೇ ಪಿಡಬ್ಲ್ಯೂಡಿ ಹಾಗೂ ನಗರಸಭೆಯಿಂದ ಪರವಾನಿಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ನಂತರ ಮಾತನಾಡಿದ ಶಿಕ್ಷಣ ಇಲಾಖೆ ಜಿಲ್ಲಾ ಉಪನಿರ್ದೇಶಕ ಕೆ. ಕೊಟ್ರೇಶ್, ಶಾಲೆಯ ಹಳೆ ಕಟ್ಟಡ ತೆರವಿಗೆ ಇಲಾಖೆಯಲ್ಲಿ ಅನುದಾನದ ಕೊರತೆ ಇದೆ. ಕಾಂಪೌಂಡ್ ನಿರ್ಮಾಣ ಹಾಗೂ ಹಳೆ ಕಟ್ಟಡ ತೆರವಿಗೆ ಪಿಡಬ್ಲ್ಯೂಡಿ ಇಲಾಖೆಯಿಂದ ಕ್ರಿಯಾಯೋಜನೆ ಸಿದ್ಧಪಡಿಸಿ ವರದಿ ನೀಡುವಂತೆ ಮುಖ್ಯ ಶಿಕ್ಷಕರಿಗೆ ತಿಳಿಸಿದರು.

ಕಾಂಪೌಂಡ್ ನಿರ್ಮಾಣ ಹಾಗೂ ಹಳೆ ಕಟ್ಟಡ ತೆರವಿಗೆ ಜಿಪಂನಿಂದ ಅನುದಾನ ಬಿಡುಗಡೆಗೆ ಸಿಇಒ ಅವರ ಬಳಿ ಕೋರಿಕೊಳ್ಳಲಾಗುವುದು ಎಂದು ತಿಳಿಸಿದರು.

ಕನ್ನಡ ವಿಷಯ ಪರಿವೀಕ್ಷಕ ಕುಮಾರ ಹನುಮಂತಪ್ಪ ಸಾರಥಿ, ಎಸ್‌ಡಿಎಂಸಿ ಉಪಾಧ್ಯಕ್ಷ ಶಿವಕುಮಾರ್, ಶಿಕ್ಷಕರಾದ ಈಶಪ್ಪ ಬೂದಿಹಾಳ್, ಇಮ್ತಿಯಾಜ್, ಜಹಮದ್, ಪ್ರಶಾಂತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net