

ಆಲೂರು : ವಿದ್ಯಾರ್ಥಿಗಳ ಪ್ರತಿಭೆ ವಿಕಸನಕ್ಕೆ ಬೆಂಬಲಿಸಿ ಎಂದು ಶಾಸಕ ಸಿಮೆಂಟ್ ಮಂಜು ಸಲಹೆ ನೀಡಿದರು.
ಕಣತೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕು ಮಟ್ಟದ ‘ಮಕ್ಕಳ ಸಾಹಿತ್ಯ ಸಂಭ್ರಮ’ 3 ದಿನಗಳ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಗ್ರಾಮೀಣ ಭಾಗದ ಮಕ್ಕಳಲ್ಲಿರುವ ಪ್ರತಿಭೆ ಅರಳಲು ಸೂಕ್ತ ಅವಕಾಶ ದೊರಕಬೇಕು. ಹಿಂಜರಿಕೆ ಮನೋಭಾವದ ಮಕ್ಕಳಿಗೆ ಬೆಂಬಲಿಸಬೇಕು. ಸಾಹಿತ್ಯದ ಬೆಳವಣಿಗೆಗೆ ಇದು ಪೂರಕ. ನಮಗೆ ಬಾಲ್ಯದಲ್ಲಿ ಸಿಗದ ಅವಕಾಶ ಇಂದು ಈ ಮಕ್ಕಳಿಗೆ ದೊರಕುತ್ತಿರುವುದು ಸಂತಸ ಎಂದರು.
ತಾಪಂ ಪ್ರಭಾರ ಇಒ ಗಿರೀಶ್ ಮಾತನಾಡಿ, ಮಕ್ಕಳ ಅಭಿರುಚಿ, ಆಲೋಚನೆ, ಕಲ್ಪನೆಗಳು ಕಥೆ ಕವನ ಹಾಗೂ ನಾಟಕಗಳ ಮೂಲಕ ಅಭಿವ್ಯಕ್ತಗೊಳ್ಳುತ್ತವೆ. ಇಂತಹ ಅಭಿವ್ಯಕ್ತಿ ಮಾಧ್ಯಮಗಳಿಗೆ ಅವಕಾಶ ಒದಗಿಸುವುದು ಮಕ್ಕಳ ಸಂಭ್ರಮ ಸಾಹಿತ್ಯ ಸಂಭ್ರಮದ ಮುಖ್ಯ ಉದ್ದೇಶ ಎಂದರು. ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಂಗರಾಜ್, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್ ಹುಲ್ಲಳ್ಳಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಶೋಭಾ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಹಾಯಕ ನಿರ್ದೇಶಕ ಎ.ಟಿ.ಮಲ್ಲೇಶ, ಬಿಆರ್‌ಸಿ ಸುಜಾತಾ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಚಂದ್ರಮ್ಮ, , ತಾಳೂರು ಸರ್ಕಾರಿ ಶಾಲಾ ಮುಖ್ಯ ಶಿಕ್ಷಕ ಕೊಟ್ರೇಶ್ ಉಪ್ಪಾರ ಇತರರು ಹಾಜರಿದ್ದರು.