ಶಾಲಾ ಕೊಠಡಿ, ಇಂಟರ್‌ಲಾಕ್ ಅಳವಡಿಕೆಗೆ ಚಾಲನೆ

HUN
ಹುಣಸೂರು ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಜಿ.ಡಿಹರೀಶ್‌ಗೌಡ, ಎಂಎಲ್ಸಿ ಡಿ.ತಿಮ್ಮಯ್ಯ ಚಾಲನೆ ನೀಡಿದರು. ಕರವೇ ಪುರುಷೋತ್ತಮ್, ರಮೇಶ್, ಹೇಮಲತಾ, ಪ್ರತಿಭ, ಸುಷ್ಮಾ ಇದ್ದರು.
Published on

ಹುಣಸೂರು: ಪಟ್ಟಣದ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಕೊಠಡಿ ಹಾಗೂ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಹೊರ ಆವರಣದಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗಳಿಗೆ ಶಾಸಕ ಜಿ.ಡಿ.ಹರೀಶ್‌ಗೌಡ, ಎಂಎಲ್ಸಿ ಡಿ.ತಿಮ್ಮಯ್ಯ ಸೋಮವಾರ ಭೂಮಿಪೂಜೆ ನೆರವೇರಿಸಿದರು.

ಎಂಎಲ್ಸಿ ಡಿ.ತಿಮ್ಮಯ್ಯ ಮಾತನಾಡಿ, ನಾನು ಹುಣಸೂರು ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿದವನಾಗಿದ್ದು, ನನ್ನೂರಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಪ್ರತಿ ವರ್ಷ ಅನುದಾನ ನೀಡಲಿದ್ದೇನೆ. ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಬಾಬೂ ಜಗಜೀವನರಾಂ ಸಮುದಾಯ ಭವನ ಕಳೆದ 15 ವರ್ಷಗಳಿಂದ ಅನುದಾನ ಕೊರತೆಯಿಂದಾಗಿ ಅರ್ಧಕ್ಕೆ ನಿಂತಿದೆ. ಇದೀಗ ಈ ಕಟ್ಟಡ ಕಾಮಗಾರಿಗೆ 20 ಲಕ್ಷ ರೂ. ಅನುದಾನ ಒದಗಿಸಿದ್ದೇನೆ. ಮಲ್ನಾಡ್ ಅಭಿವೃದ್ಧಿ ಯೋಜನೆಯಡಿ ನಗರದ ಸದಾಶಿವನಕೊಪ್ಪಲು ಬಡಾವಣೆಯ ಸರ್ಕಾರಿ ಶಾಲೆಗೆ 5 ಲಕ್ಷ ರೂ., ಸ್ಮಶಾನಾಭಿವೃದ್ಧಿಗೆ 5 ಲಕ್ಷ ರೂ., ಜಾಬಗೆರೆ ಗ್ರಾಮದ ರಸ್ತೆ ಇನ್ನಿತರ ಅಭಿವೃದ್ಧಿ ಕಾಮಗಾರಿಗಳಿಗಾಗಿ ಒಟ್ಟು 15 ಲಕ್ಷ ರೂ., ಬಿಳಿಗೆರೆ ಗ್ರಾಮದ ಸರ್ಕಾರಿ ಶಾಲೆಯ ಕಾಂಪೌಂಡ್ ನಿರ್ಮಾಣಕ್ಕೆ 5 ಲಕ್ಷ ರೂ. ಅನುದಾನ ನೀಡಿದ್ದೇನೆ. ಕಳೆದ ಎರಡು ವರ್ಷಗಳಿಂದ ತಾಲೂಕಿನ ಅಭಿವೃದ್ಧಿ ಕಾಮಗಾರಿಗಳಿಗಾಗಿ 90 ಲಕ್ಷ ರೂ. ಅನುದಾನದೊಂದಿಗೆ ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದೇನೆ. ಮುಂದಿನ ದಿನಗಳಲ್ಲೂ ಶಾಸಕ ಜಿ.ಡಿ.ಹರೀಶ್‌ಗೌಡರೊಡಗೂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಕೈಜೋಡಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ಜಿ.ಡಿ.ಹರೀಶ್‌ಗೌಡ ಮಾತನಾಡಿ, ಗ್ಯಾರಂಟಿ ಯೋಜನೆಗಳ ನಡುವೆಯೂ ನಾನು ಮತ್ತು ವಿಧಾನಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ ಅವರು ಸರ್ಕಾರದ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡಿದ್ದೇವೆ. ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 1 ಕೋಟಿ ರೂ.ವೆಚ್ಚದಡಿ ಒಸಾಟ್ ಸಂಸ್ಥೆ 6ಕ್ಕೂ ಹೆಚ್ಚು ಸುಸಜ್ಜಿತ ಕೊಠಡಿಗಳು, ಶೌಚಗೃಹಗಳನ್ನು ನಿರ್ಮಿಸಿಕೊಡುತ್ತಿದೆ. 4 ವರ್ಷಗಳ ಹಿಂದೆ ಮುಚ್ಚುವ ಹಂತ ತಲುಪಿದ್ದ ಈ ಶಾಲೆ ಇದೀಗ ಸರ್ಕಾರೇತರ ಸಂಘ-ಸಂಸ್ಥೆಗಳು, ಕರ್ನಾಟಕ ರಕ್ಷಣಾ ವೇದಿಕೆ, ಎಸ್‌ಡಿಎಂಸಿ, ಹಳೆಯ ವಿದ್ಯಾರ್ಥಿಗಳ ಸಂಘಗಳ ಸಹಕಾರದೊಂದಿಗೆ ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್ ಮತ್ತವರ ತಂಡ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುವ ಮೂಲಕ ಶಾಲೆಯನ್ನು ಉಳಿಸಿಕೊಂಡಿದೆ. ನಗರದ ಬಾಬೂ ಜಗಜೀವನರಾಂ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳ್ಳಲು ತಮ್ಮ ಶಾಸಕರ ಅನುದಾನದಡಿ ನಾನೂ 15 ಲಕ್ಷ ರೂ. ಆರ್ಥಿಕ ನೆರವನ್ನು ನೀಡಲಿದ್ದೇನೆ ಎಂದು ಭರವಸೆ ನೀಡಿದರು.

ಇದೇ ವೇಳೆ ಪಕ್ಕದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹೊರ ಆವರಣದಲ್ಲಿ 5 ಲಕ್ಷ ರೂ. ವೆಚ್ಚದಡಿ ಇಂಟರ್‌ಲಾಕ್(ನೆಲಹಾಸು) ಅಳವಡಿಕೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.

ಮುಖಂಡರಾದ ಹರವೆ ಶ್ರೀಧರ್, ಡಿ.ಕುಮಾರ್, ಶಾಲೆಯನ್ನು ದತ್ತು ಪಡೆದಿರುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಪುರುಷೋತ್ತಮ್, ಎಸ್‌ಡಿಎಂಸಿ ಅಧ್ಯಕ್ಷ ರಮೇಶ್, ಪ್ರಣಬ್, ಕ್ಷೇತ್ರ ಸಮನ್ವಯಾಧಿಕಾರಿ ಹೇಮಲತಾ, ಮುಖ್ಯಶಿಕ್ಷಕ ಡಾ.ಮಾದುಪ್ರಸಾದ್, ಪಿಯು ಕಾಲೇಜಿನ ಪ್ರಾಂಶುಪಾಲ ಎ.ರಾಮೇಗೌಡ, ಬಿಆರ್‌ಪಿ ಪ್ರತಿಭಾ, ಸುಷ್ಮಾ, ರಾಜೇಶ್ವರಿ, ಸೋಮಸುಂದರ್, ಎಸ್‌ಡಿಎಂಸಿ ಸದಸ್ಯರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net