

ಸರಗೂರು: ಕ್ಷೇತ್ರದ ಬಲ್ಲೇಹಾಡಿ, ಗೋಳೂರು ಹಾಡಿ ನಿವಾಸಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿ, ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಶೈಲಜಾ ರಾಮಕೃಷ್ಣ ಚಾರಿಟಬಲ್ ಟ್ರಸ್ಟ್ ಅವಿರತವಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ತಾಲೂಕು ಪರಿಶಿಷ್ಟ ಪಂಗಡ ಮತ್ತು ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಹೇಶ್ ತಿಳಿಸಿದರು.
ತಾಲೂಕಿನ ಗೋಳೂರು ಹಾಡಿಯಲ್ಲಿ ಶೈಲಜಾ ರಾಮಕೃಷ್ಣ ಚಾರಿಟೇಬಲ್ ಟ್ರಸ್ಟ್, ಜಿಎಚ್‌ಪಿಎಸ್‌ನಿಂದ ನೂತನವಾಗಿ ನಿರ್ಮಾಣಗೊಂಡ ಶಾಲೆಯ ಕೊಠಡಿ ಉದ್ಘಾಟನೆ, ವಾಲಿಬಾಲ್ ಪಂದ್ಯಾವಳಿ, ಬುಡಕಟ್ಟು ನಿವಾಸಿಗಳ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆದಿವಾಸಿಗಳ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಒದಗಿಸಿದೆ. ಅಲ್ಲದೆ ಮೂಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚು ಒತ್ತು ನೀಡಿದ್ದಾರೆ. ಹೀಗಾಗಿ ಮೂಲ ಸೌಲಭ್ಯಗಳು ಶೀಘ್ರದಲ್ಲೇ ದೊರಕಲಿವೆ. ನಿವಾಸಿಗಳಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಒದಗಿಸಿಕೊಡುವಲ್ಲಿ ಇಲಾಖೆಯೊಂದಿಗೆ ಕೈಜೋಡಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುತ್ತಿದ್ದಾರೆ. ಹಾಡಿ ಜನರು ಇತರರೊಂದಿಗೆ ಬೆರೆಯಬೇಕು ಎಂದು ಅವರು ಸಲಹೆ ನೀಡಿದರು.
ಶಿಕ್ಷಣ ಇಲಾಖೆ ವಿಭಾಗೀಯ ಸಂಪನ್ಮೂಲ ಅಧಿಕಾರಿ ನಂಜಯ್ಯ ಮಾತನಾಡಿ, ಆರ್‌ಜಿಎಚ್‌ಎಸ್ ಸಂಸ್ಥೆಯೂ ಎರಡು ವರ್ಷಗಳಿಂದ ಹಾಡಿ ಭಾಗದ ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಇದರ ಫಲವಾಗಿ ಶಾಲೆಯ ಅಭಿವೃದ್ಧಿ ಸಮಿತಿ ಸಹಕಾರದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡಿ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಗುವಂತೆ ಮಾಡಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದು ಹೇಳಿದರು.
ಆರ್‌ಜಿಎಚ್‌ಎಸ್ ಸಂಸ್ಥೆ ಅಧ್ಯಕ್ಷೆ ಶೈಲಜಾ ರಾಮಕೃಷ್ಣ ಮಾತನಾಡಿ, ಸಂಸ್ಥೆಯು ಹಾಡಿ ಶಾಲೆ ಮಕ್ಕಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ತಮ್ಮ ಕೆಲಸದ ನಡುವೆಯೂ ಬಿಡುವಿನ ವೇಳೆ ಹಾಡಿಗೆ ಭೇಟಿ ನೀಡಿ, ಸಮಾಜಮುಖಿ ಸೇವೆಯನ್ನು ಮಾಡಲಾಗುತ್ತಿದೆ. ಇದರಿಂದಾಗಿ ನಿವಾಸಿಗಳಲ್ಲಿ ಸ್ವಲ್ಪ ಬದಲಾವಣೆ ಕಾಣಬಹುದಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹರೀಶ್‌ಕುಮಾರ್, ನಿರ್ದೇಶಕರಾದ ಶಿವಪ್ರಸಾದ್, ರಾಜೇಶ್, ಶೇಖರ್, ಹಿರಿಯ ಮಾರ್ಗದರ್ಶಕ ಬಾಲಕೃಷ್ಣ, ಪೊಲೀಸ್ ಇಲಾಖೆ ಪರಶಿವಮೂರ್ತಿ, ಅರಣ್ಯ ಇಲಾಖೆಯ ಚಿಕ್ಕಣ್ಣ, ಸ್ವಯಂ ಸೇವಕರಾದ ಗೋವಿಂದರಾಜು, ಬಸವಣ್ಣ, ಮಂಜುಳಾ, ಮುಖ್ಯ ಶಿಕ್ಷಕ ಕಾರ್ತಿಕ, ಸಹ ಶಿಕ್ಷಕರಾದ ಭಾಗ್ಯಾ, ಶಾಂತರಾಜು, ಬಸವರಾಜು, ವಸಂತ್, ಹಾಡಿ ಮುಖಂಡರಾದ ರಾಜು, ಮಾದೇವಯ್ಯ ಹಾಜರಿದ್ದರು.
ಇದೇ ಸಂದರ್ಭದಲ್ಲಿ ನಡೆದ ವಾಲಿಬಾಲ್ ಪಂದ್ಯಾವಳಿಯಲ್ಲಿ ಗೋಳೂರು ಹಾಡಿ ತಂಡ ಪ್ರಥಮ, ಭೋಗಪುರ ಗ್ರಾಮದ ತಂಡ ದ್ವಿತೀಯ ಸ್ಥಾನ ಪಡೆದು ಪ್ರಶಸ್ತಿ ತಮ್ಮದಾಗಿಸಿಕೊಂಡವು. ಬುಡಕಟ್ಟು ನಿವಾಸಿಗಳು ನಡೆಸಲಾದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಜಯಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು.