ಶಾಲೆ ರಿಪೇರಿ ಮಾಡಿಸದೆ ಪುನರಾರಂಭ

ಶಾಲೆ ರಿಪೇರಿ ಮಾಡಿಸದೆ ಪುನರಾರಂಭ
Published on

ಗುಂಡ್ಲುಪೇಟೆ: ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಿಪೇರಿ ಮಾಡಿಸದೆ ಪುನಾರಂಭ ಮಾಡಲಾಗುತ್ತಿದೆ ಎಂದು ಉಪಕಾರ ಗ್ರಾಮಸ್ಥರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಶಾಲೆಗಳನ್ನು ಆರಂಭಿಸಬೇಕಾದ ಹಿನ್ನೆಲೆಯಲ್ಲಿ ಗುರುವಾರ ಗ್ರಾಮದ ಶಾಲೆಯ ಕೊಠಡಿಗಳನ್ನು ತೆರೆದಾಗ ಕಳೆದ ಒಂದು ವಾರದಿಂದ ಬೀಳುತ್ತಿರುವ ಮಳೆ ನೀರು ಶಾಲೆಯ ಕೊಠಡಿಗಳಲ್ಲಿ ಮಡುಗಟ್ಟಿ ನಿಂತಿರುವುದು ಹಾಗೂ ಛಾವಣಿಯಿಂದ ಸಿಮೆಂಟ್ ಕಿತ್ತು ಬೀಳುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರ ತೀವ್ರ ಆಕ್ರೋಶ ಹೊರಹಾಕಿದರು.

ಕಳೆದ 25 ವರ್ಷಗಳ ಹಿಂದೆ ಗ್ರಾಮದಲ್ಲಿ ನಿರ್ಮಿಸಿದ ಶಾಲೆಯ ಛಾವಣಿ ಬಿರುಕುಬಿಟ್ಟಿದೆ. ಪ್ರತಿ ಬಾರಿಯೂ ಮಳೆ ಬಿದ್ದಾಗ ನೀರು ಸೋರುತ್ತಿದೆ. ಛಾವಣಿಗೆ ಹಾಕಿರುವ ಸಿಮೆಂಟ್ ಹಲಗೆಗಳು ಕಿತ್ತು ಉದುರುತ್ತಿವೆ. ಈ ಬಗ್ಗೆ ಎರಡು ವರ್ಷಗಳಿಂದಲೂ ಹಲವು ಬಾರಿ ಶಿಕ್ಷಣ ಇಲಾಖೆಯ ಗಮನಕ್ಕೆ ತಂದಿದ್ದರೂ ಇನ್ನೂ ರಿಪೇರಿ ಮಾಡಿಸಿಲ್ಲ. ಕಳೆದ ವರ್ಷ ತಮ್ಮೂರಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಆಗಮಿಸಿದ್ದ ಶಾಸಕ ಗಣೇಶ್‌ಪ್ರಸಾದ್ ಅವರಿಗೆ ಶಾಲೆಯನ್ನು ರಿಪೇರಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದರೂ ಯಾವುದೇ ಉಪಯೋಗವಾಗಿಲ್ಲ. ಸದ್ಯ ಶಾಲೆ ಸಂಪೂರ್ಣ ಶಿಥಿಲವಾಗಿದ್ದು, ಕುಸಿಯುವ ಭೀತಿ ಎದುರಾಗಿದೆ. ಆದ್ದರಿಂದ ಪಾಲಕರಿಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಹಿಂಜರಿಯುವಂತಾಗಿದೆ ಎಂದು ಗ್ರಾಮಸ್ಥರು ಕಿಡಿಕಾರಿದರು.

ಕಾಡಂಚಿನ ಗ್ರಾಮದಲ್ಲಿ ಗ್ರಾಮದ ಸರ್ಕಾರಿ ಶಾಲೆಯು ಶಿಥಿಲವಾಗಿದ್ದರೂ ಸರ್ಕಾರ ರಿಪೇರಿ ಮಾಡಲು ಮುಂದಾಗಿಲ್ಲ. ಅಲ್ಲದೆ ಶಾಲೆ ರಿಪೇರಿಯಾಗುವವರೆಗೆ ಮಕ್ಕಳನ್ನು 1 ಕಿ.ಮೀ. ದೂರದ ಗಿರಿಜನ ಕಾಲನಿಯ ಶಾಲೆಗೆ ಸ್ಥಳಾಂತರಿಸುವುದಾಗಿ ಹೇಳುತ್ತಿದ್ದಾರೆ. ವನ್ಯಜೀವಿಗಳ ಹಾವಳಿಯ ನಡುವೆ ಮಕ್ಕಳನ್ನು ಕಾಲ್ನಡಿಗೆಯಲ್ಲಿ ಕಳಿಸಲು ಪಾಲಕರು ಹೆದರುತ್ತಿದ್ದಾರೆ.

ಗಂಗಾಧರ ಸ್ವಾಮಿ, ಗ್ರಾಮಸ್ಥ

ಗಣಿ ಇಲಾಖೆಯು ಗಣಿಬಾಧಿತ ಪ್ರದೇಶಾಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನದಲ್ಲಿ 7 ಲಕ್ಷ ರೂ.ಗಳನ್ನು ಶಾಲೆಯ ರಿಪೇರಿಗೆ ಮೀಸಲಿರಿಸಲಾಗಿದೆ. ಶಾಸಕರ ಗಮನಕ್ಕೆ ತಂದು ರಿಪೇರಿ ಕಾಮಗಾರಿ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮಕ್ಕಳಿಗೆ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತರಗತಿ ನಡೆಸಲು ಅವಕಾಶ ಕೊಡುವಂತೆ ಶಿಶು ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.

ಟಿ.ಆರ್.ಸ್ವಾಮಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net